

ಚಿತ್ರದುರ್ಗ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ಹಾಗೂ ಪಾವಗಡ-ರಾಯದುರ್ಗ ರೈಲು ಮಾರ್ಗಗಳನ್ನು 2027 ಜನವರಿ ಒಳಗೆ ಪ್ರಧಾನಮಂತ್ರಿ ನರೇಂದ್ರಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಡಿಸಿ ಕಚೇರಿಯಲ್ಲಿ ಬುಧವಾರ ನೇರ ರೈಲ್ವೆ ಮಾರ್ಗ ಪ್ರಗತಿ ಪರಿಶೀಲಿಸಿ ಮಾತನಾಡಿ, ಶೇ.50-50 ಅನುಪಾತದೊಂದಿಗೆ 2140 ಕೋಟಿ ರೂ. ವೆಚ್ಚದ ನೇರ ರೈಲು ಮಾರ್ಗ ಅನುಷ್ಠಾನವಾಗುತ್ತಿದೆ ಎಂದರು.
ಆದರೆ, ರಾಜ್ಯ ಸರ್ಕಾರದಿಂದ ಈಗ ಭೂಮಿ ಮಾತ್ರ ಕೇಳಿದ್ದೇವೆ. ಎರಡೂ ಯೋಜನೆಗೆ 2409 ಎಕರೆ ಭೂಮಿ ಪೈಕಿ 280 ಎಕರೆ ಸ್ವಾಧೀನವಾಗಬೇಕಿದೆ. ಪ್ರಧಾನಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ಈ ಮಾರ್ಗ ಉದ್ಘಾಟಿಸಬೇಕಿದೆ. ಆದ್ದರಿಂದ ಕಾಮಗಾರಿ ತ್ವರಿತಗತಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ ಎಂದರು.
ಅರಸೀಕೆರೆ-ತುಮಕೂರು ಮಾರ್ಗದಲ್ಲಿ ವಿಶೇಷ ಸಿಗ್ನಲ್ ಅಳವಡಿಸಲಾಗುತ್ತಿದೆ. ಒಂದೇ ಮಾರ್ಗದಲ್ಲಿ ರೈಲು ಎದುರಾಗಿ ಸಂಚರಿಸುವ ಸಂದರ್ಭದಲ್ಲಿ 3 ಕಿ.ಮೀ. ದೂರದಲ್ಲೇ ಲೋಕೋ ಪೈಲಟ್‌ಗೆ ಮಾಹಿತಿ ಹೋಗುತ್ತದೆ. ಆದಾಗ್ಯೂ ರೈಲು ಮುಂದೆ ಚಲಿಸಿದರೆ 50 ಮೀಟರ್ ದೂರದಲ್ಲಿ ನಿಲ್ಲುತ್ತದೆ. ಅಪಘಾತಕ್ಕೆ ಕಾರಣ ತಿಳಿಸುವ ಬ್ಲಾಕ್‌ಬಾಕ್ಸ್‌ಗಳನ್ನು ರೈಲುಗಳಲ್ಲಿ ಅಳವಡಿಸಲಾಗುತ್ತದೆ ಎಂದು ವಿವರಿಸಿದರು.
ಕರ್ನಾಟಕದ 10 ಜಿಲ್ಲೆಗಳ ಸಹಿತ ದೇಶದ 303 ಜಿಲ್ಲೆಗಳಲ್ಲಿ 103 ವಂದೇ ಭಾರತ ರೈಲು ಸಂಚರಿಸುತ್ತಿವೆ. ರೈಲುಗಳ ವೇಗ 165 ಕಿ.ಮಿ.ಗೆ ಹೆಚ್ಚಿಸಲಾಗುತ್ತಿದೆ. 49 ಸಾವಿರ ಕಿ.ಮೀ. ಡಬ್ಲಿಂಗ್, ಶೇ.98 ಎಲೆಕ್ಟ್ರಿಫಿಕೇಷನ್ ಲೈನ್ ಪೂರ್ಣಗೊಂಡಿದೆ. ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಹಾದುಹೋಗಿರುವ 741 ಕಿ.ಮೀ. ಉದ್ದದ ಕೊಂಕಣರೈಲು ಮಾರ್ಗ ಡಬ್ಲಿಂಗ್ ಕಾರ‌್ಯ ನಡೆದಿದೆ ಎಂದರು.
ಉತ್ತರ ಪ್ರದೇಶ ಕುಂಭಮೇಳದಲ್ಲಿ 40 ಕೋಟಿ ಜನರು ಭಾಗವಹಿಸಲಿದ್ದಾರೆ. ಆದ್ದರಿಂದ ಪ್ರಯಾಗ್‌ರಾಜ್‌ಗೆ 600 ಕ್ಕೂ ಹೆಚ್ಚು ರೈಲುಗಳು ಸಂಚರಿಸಲಿವೆ. ತುಮಕೂರು-ಬೆಂಗಳೂರಿನ ಯಶವಂತಪುರ ನಡುವೆ ಮೆಮು ಟ್ರೈನ್ ಸಂಚರಿಸುತ್ತಿದೆ. ಟಿಕೆಟ್ ದರ 20 ರೂ.ಇದೆ. ನಮ್ಮ ರಾಜ್ಯದಲ್ಲಿ 41800 ಕೋಟಿ ರೂ.ವೆಚ್ಚದ ರೈಲ್ವೆ ಯೋಜನೆ ಪ್ರಗತಿಯಲ್ಲಿವೆ ಎಂದು ಹೇಳಿದರು.
ನೂತನ ಮಾರ್ಗ ನಿರ್ಮಾಣ ವೇಳೆ ಆರ್‌ಒಬಿಗಳಿಗೆ ಆದ್ಯತೆ ಕೊಡಬೇಕು. ಗುಣಮಟ್ಟದಲ್ಲಿ ರಾಜಿ ಇಲ್ಲ. ತಪ್ಪಿದ್ದಲ್ಲಿ ಶಿಸ್ತು ಕ್ರಮ ಖಚಿತ ಎಂದು ಅಧಿಕಾರಿಗಳನ್ನು ಎಚ್ಚರಿಸುವುದಾಗಿ ಹೇಳಿದರು.
ದಾವಣಗೆರೆ-ತುಮಕೂರು ನೇರ ರೈಲ್ವೆಗೆ ಜಿಲ್ಲೆಯಲ್ಲಿ 1211 ಎಕರೆ ಪೈಕಿ 1026 ಎಕರೆ ರೈಲ್ವೆಗೆ ಹಸ್ತಾಂತರಿಸಲಾಗಿದೆ ಎಂದು ಡಿಸಿ ಟಿ. ವೆಂಕಟೇಶ್ ಮಾಹಿತಿ ನೀಡಿದರು.
ಭರಮಸಾಗರ - ಚಿತ್ರದುರ್ಗ, ಚಿತ್ರದುರ್ಗ-ಹಿರಿಯೂರು ಹಾಗೂ ಹಿರಿಯೂರು-ತಾವರಕೆರೆ ನಡುವೆ 3 ಹಂತದಲ್ಲಿ ಭೂಸ್ವಾಧೀನ ನಡೆಸಲಾಗುತ್ತಿದ್ದು, ಶೇ.90 ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.
ಸಂಸದ ಗೋವಿಂದ ಎಂ. ಕಾರಜೋಳ, ಶಾಸಕರಾದ ಡಾ.ಎಂ. ಚಂದ್ರಪ್ಪ, ಟಿ. ರಘುಮೂರ್ತಿ, ಎಂಎಲ್‌ಸಿ ಕೆ.ಎಸ್. ನವೀನ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಭೂಸ್ವಾಧೀನಾಧಿಕಾರಿ ವೆಂಕಟೇಶ್, ಮುಖ್ಯಆಡಳಿತಾಧಿಕಾರಿ ಸಂದೀಪ್ ಶರ್ಮಾ, ಮುಖ್ಯಇಂಜಿನಿಯರ್‌ಗಳಾದ ಪ್ರದೀಪ್‌ಪುರಿ, ಸಂಜಯ್‌ಬನ್ಸಾರಿ, ಡಿಇ ರಜತ್, ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಕಲಗೊಂಡ, ಡಿಸಿಎಫ್ ಟಿ. ರಾಜಣ್ಣ, ತಹಸೀಲ್ದಾರ್ ಡಾ. ನಾಗವೇಣಿ ಮತ್ತಿತರ ಅಧಿಕಾರಿಗಳಿದ್ದರು.
ಜಿಲ್ಲಾಧಿಕಾರಿಗೆ ಮೆಚ್ಚುಗೆ
ದೇಶಾದ್ಯಂತ ರೈಲ್ವೆ ಸಂಪರ್ಕ ಕ್ರಾಂತಿ ಸಾಧನೆ ಪ್ರಧಾನಿ ಮೋದಿ ಅವರ ಕನಸಿನ ಕೂಸಾಗಿದೆ. ಸ್ವತಃ ಮೋದಿ ಅವರೇ ಹಾಟ್ ಲೈನ್ ಮೂಲಕ ಪ್ರಗತಿ ಕುರಿತು ತಮ್ಮನ್ನು ವಿಚಾರಿಸುತ್ತಿರುತ್ತಾರೆ ಎಂದು ಹೇಳಿದ ಸಚಿವ ಸೋಮಣ್ಣ, ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದರ ಸಲಹೆ ಪಡೆದು ಸಮಸ್ಯೆ ಬಗೆಹರಿಸಿ
ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಹಲವು ಆರ್‌ಯುಬಿಗಳಲ್ಲಿ ಮಳೆ ನೀರು ಸೂಕ್ತ ಹರಿಯದೇ ಸಂಚಾರಕ್ಕೆ ಅಡಚಣೆ ಆಗುತ್ತಿದೆ ಎಂದು ಶಾಸಕರಾದ ಡಾ.ಎಂ. ಚಂದ್ರಪ್ಪ, ಟಿ. ರಘುಮೂರ್ತಿ ಸಚಿವರ ಗಮನ ಸೆಳೆದರು.
ಸಂಸದರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಸಮಸ್ಯೆ ಬಗೆಹರಿಸಬೇಕೆಂದು ರೈಲ್ವೆ ಇಂಜಿನಿಯರ್‌ಗೆ ಸಚಿವರು ತಾಕೀತು ಮಾಡಿದರು.