ಇನ್ನೂ ಸ್ಥಳಾಂತರಗೊಳ್ಳದ ವ್ಯಾಪಾರಸ್ಥರು

byd MARKET
Published on

ಬ್ಯಾಡಗಿ: ಪಟ್ಟಣ ವ್ಯಾಪ್ತಿಯ ಮಾಂಸದಂಗಡಿಗಳನ್ನು ಒಂದೇ ಜಾಗದಲ್ಲಿ ಆರಂಭಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಕುರಿತು ಎರಡು ಬಾರಿ ಪುರಸಭೆ ಸದಸ್ಯರ ಸಭೆ ನಡೆಸಿ ಚರ್ಚಿಸಿ, ಸ್ಥಳಾಂತರಕ್ಕೆ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಆದರೆ, ಈವರೆಗೂ ವ್ಯಾಪಾರಸ್ಥರು ಸ್ಥಳಾಂತರಗೊಂಡಿಲ್ಲ.

ಬ್ಯಾಡಗಿ ಪುರಸಭೆ ಈ ಹಿಂದೆ ಮೂರು ಬಾರಿ ಅತ್ಯುತ್ತಮ ಪುರಸಭೆ ಎಂದು ಪುರಸ್ಕೃತವಾಗಿದೆ. ಒಳಚರಂಡಿ ವ್ಯವಸ್ಥೆ, 24*7 ಕುಡಿಯುವ ಶುದ್ಧ ನೀರು, ಮನೆ ಮನೆ ಕಸ ಸಂಗ್ರಹ ಮೂಲಕ ಜಿಲ್ಲೆಯಲ್ಲಿ ಉತ್ತಮ ಪುರಸಭೆ ಎಂಬ ಖ್ಯಾತಿ ಇಂದಿಗೂ ಉಳಿಸಿಕೊಂಡಿದೆ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಚಿಕನ್, ಮಾಂಸದಂಗಡಿಗಳು ತಲೆ ಎತ್ತಿವೆ. ಕೆಲವರು ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪರವಾನಗಿ ನೀಡುವಾಗ ತಿಳಿಸಿದಂತೆ ಷರತ್ತುಗಳನ್ನು ಪಾಲಿಸಲು ಸ್ವಚ್ಛತಾ ಅಧಿಕಾರಿಗಳು ಹಲವು ಬಾರಿ ನೋಟಿಸ್ ಜಾರಿಗೊಳಿಸಿ, ಮೌಖಿಕವಾಗಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಕೂಡ ಸ್ಥಳೀಯರ ಆರೋಗ್ಯ ದಷ್ಟಿಯಿಂದ ಆಹಾರ ಸುರಕ್ಷತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕೆಂದು ಸಭೆಯಲ್ಲಿ ನಿರ್ದೇಶಿಸಿದ್ದಾರೆ. ಹೀಗಾಗಿ ಮಾಂಸ ಹಾಗೂ ಚಿಕನ್ ಮಾರಾಟಕ್ಕೆ ಸಂತೆ ಮಾರುಕಟ್ಟೆಯ ಕೆಲ ಮಳಿಗೆಗಳನ್ನು ಕಾಯ್ದಿರಿಸಲಾಗಿದೆ.

ಎಲ್ಲೆಂದರಲ್ಲಿ ತ್ಯಾಜ್ಯ:

ಕೋಳಿ ಹಾಗೂ ಮಾಂಸದ ಅಂಗಡಿಗಳ ಬಳಿ ತ್ಯಾಜ್ಯ ಬಿದ್ದು ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ನಾಯಿಗಳು ಮಾಂಸದ ತುಂಡುಗಳನ್ನು ತಿನ್ನಲು ಹಿಂಡು ಹಿಂಡಾಗಿ ಓಡಾಡುತ್ತಿವೆ. ಅಲ್ಲದೆ, ಅಂತಹ ಅಂಗಡಿಗಳಿರುವ ರಸ್ತೆಗಳಲ್ಲಿ ಸಂಪೂರ್ಣ ವಾತಾವರಣ ಕೆಡುತ್ತಿದ್ದು, ದುರ್ನಾತ ಉಂಟಾಗಿದೆ. ಕೆಲ ಅಂಗಡಿಯವರು ಯಾವುದೆ ನಿಯಮ ಪಾಲಿಸುತ್ತಿಲ್ಲ. ಚಿಕನ್ ಹಾಗೂ ಮಾಂಸವನ್ನು ತೆರೆದ ಅಂಗಡಿಗಳಲ್ಲಿ ತೂಗು ಹಾಕಲಾಗುತ್ತಿದೆ.

26 ವ್ಯಾಪಾರಿಗಳಿಗೆ ನೋಟಿಸ್:

ಮಾಂಸದಂಗಡಿಗಳ ವ್ಯಾಪಾರಸ್ಥರಿಗಾಗಿ ಸಂತೆ ಮಾರುಕಟ್ಟೆಯ ವಾಣಿಜ್ಯ ಮಳಿಗೆಗಳನ್ನು ಮೀಸಲಿಡಲಾಗಿದೆ. ಎಲ್ಲ ವ್ಯಾಪಾರಸ್ಥರೊಂದಿಗೆ ಚರ್ಚಿಸಿ ಸಭೆ ನಡೆಸಲಾಗಿದೆ. ಬ್ಯಾಡಗಿಯಲ್ಲಿ 22 ಚಿಕನ್, 4 ಮಟನ್ ಹಾಗೂ 2 ಮೀನು ಮಾರಾಟದ ಅಂಗಡಿಗಳಿದ್ದು, ಈ ಪೈಕಿ 26 ವ್ಯಾಪಾರಸ್ಥರಿಗೆ ನೋಟಿಸ್ ಕಡ್ಡಾಯವಾಗಿ ಜಾರಿಗೊಳಿಸಿ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. 30 ಮಳಿಗೆಗಳನ್ನು ಸಂತೆ ಮಾರುಕಟ್ಟೆಯಲ್ಲಿ ಮೀಸಲಿಟ್ಟಿದ್ದು, ಈವರೆಗೂ ಖಾಲಿ ಉಳಿದಿವೆ. ಆದರೆ, ಈವರೆಗೂ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ನಿರ್ಧಾರ ಠರಾವಿನಲ್ಲಿ ಉಳಿದಿದೆಯೇ ಹೊರತು ಕಾರ್ಯಗತವಾಗಿಲ್ಲ.

ಸಂತೆ ಮಾರುಕಟ್ಟೆಯಲ್ಲಿ ಚಿಕನ್, ಮಟನ್ ಹಾಗೂ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದೇವೆ. ಮಳಿಗೆಗೆ ಕೇವಲ 1 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ. ಪಟ್ಟಣದ ಸಾರ್ವಜನಿಕರ ಆರೋಗ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಕಾಯ್ದೆಗಳಿಗೆ ಎಲ್ಲರೂ ಸಹಕಾರ ನೀಡಬೇಕು. ಈ ಕುರಿತು ಹಲವು ಬಾರಿ ಮೌಖಿಕವಾಗಿ ಸೂಚನೆ ನೀಡಿದ್ದು, ನಿರ್ಲಕ್ಷ್ಯ ತೋರಿದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಾನೂನು ಕ್ರಮ ಜರುಗಿಸಲಾಗುವುದು.

ವಿನಯಕುಮಾರ ಹೊಳೆಯಪ್ಪಗೋಳ, ಪುರಸಭೆ ಮುಖ್ಯಾಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net