

ಹುಬ್ಬಳ್ಳಿ: ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕ ಐದನೇ ದಿನವೂ ಮದ್ಯಪ್ರಿಯರ ದಾಹ ತೀರಿಲ್ಲ. ದಾಸ್ತಾನು ಕೊರತೆಯಿಂದ ಬಹುತೇಕ ಬಾರ್ಗಳು ಬಂದ್ ಆಗಿದ್ದವು. ಆದರೂ ಮದ್ಯಪ್ರಿಯರು ಶುಕ್ರವಾರವೂ ಬಾರ್ಗಳ ಮುಂದೆ ಸರತಿ ಸಾಲಲ್ಲಿ ನಿಂತು ಮದ್ಯ ಖರೀದಿಸಿದರು.
ಬಾರ್ ಮಾಲೀಕರು ಕೇಳಿದಷ್ಟು ದಾಸ್ತಾನು ದೊರೆಯುತ್ತಿಲ್ಲ. ಹಾಗಾಗಿ, ಮದ್ಯಪ್ರಿಯರಿಗೆ ನೆಚ್ಚಿನ ಬ್ರಾಂಡ್ಗಳು ಸಿಗುತ್ತಿಲ್ಲ. ಅಗ್ಗದ ಬೆಲೆಯ ಮದ್ಯ ಮತ್ತು ದುಬಾರಿ ಬೆಲೆಯ ಮದ್ಯ ಮಾತ್ರ ಲಭ್ಯವಿದೆ. ಆದರೂ ಎದೆಗುಂದದ ಕೆಲವರು ಶುಕ್ರವಾರವೂ ಸರತಿ ಸಾಲಿನಲ್ಲಿ ನಿಂತು ಸಿಕ್ಕಷ್ಟೇ ಮದ್ಯ ಖರೀದಿಸಿ ಯುದ್ದದಲ್ಲಿ ಗೆದ್ದವರಂತೆ ಹಿರಿ ಹಿರಿ ಹಿಗ್ಗಿದರು. ಕೆಲವೆಡೆ ಪರಸ್ಪರ ಅಂತರವೂ ಇರಲಿಲ್ಲ.
ಬಾರ್ಗಳ ಎದುರು ಬಿಸಿಲಿನಲ್ಲಿ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಮದ್ಯ ಖರೀದಿಸುವವರಿಗೆ 2 ಲೀ. ಮದ್ಯ, 6 ಲೀ ಬಿಯರ್ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ಕೆಲ ಬಾರ್ ಮಾಲೀಕರು ಪರಿಚಯಸ್ಥರಿಗೆ, ಶ್ರೀಮಂತರಿಗೆ ಹೆಚ್ಚುವರಿ ಖರೀದಿಗೆ ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಶೇ. 17ರಷ್ಟು ದುಬಾರಿ: ಒಂದು ಕಡೆ ದಾಸ್ತಾನು ಕೊರತೆಯಿಂದ ಮದ್ಯಪ್ರಿಯರು ಬೇಸರಗೊಂಡಿದ್ದರೆ, ಮತ್ತೊಂದು ಕಡೆ ಸರ್ಕಾರ ಶೇ. 17ರಷ್ಟು ದರ ಹೆಚ್ಚಿಸಿರುವುದು ಹೊರೆಯಾಗಿದೆ. ಈ ಮೊದಲು ಶೇ. 6ರಷ್ಟು ದರ ಹೆಚ್ಚಿಸಿತ್ತು. ಬಳಿಕ ಕರೊನಾ ಹೆಸರಲ್ಲಿ ಶೇ. 11ರಷ್ಟು ಹೆಚ್ಚುವರಿ ತೆರಿಗೆ ನಿಗದಿಪಡಿಸಿದೆ.