ಇನ್ನೂ ಇಲ್ಲ ಆರೋಪಿಗಳ ಬಂಧನ

18KWR-Kavita Nayak
Published on

ಕಾರವಾರ: ಅಂಕೋಲಾದ ಗೃಹಿಣಿ ಆತ್ಮಹತ್ಯೆ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳನ್ನು ವಾರವಾದರೂ ಬಂಧಿಸದ ಬಗ್ಗೆ ಮೃತಳ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾ. 11ರಂದು ಅಗ್ರಗೋಣದ ಕವಿತಾ ಮಾರುತಿ ನಾಯಕ (28) ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಾವಿಗೆ ಪತಿಯ ಮನೆಯವರ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಳು ಎನ್ನಲಾಗಿದೆ. ಆದರೆ, ಪೊಲೀಸರು ಪ್ರಭಾವಕ್ಕೆ ಒಳಗಾಗಿ ಮೃತಳ ಸಾವನ್ನು ವರದಕ್ಷಿಣೆ ಕಿರುಕುಳದ ಬದಲು ಕೇವಲ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಪತಿ ಮಾರುತಿ ನಾಯಕನನ್ನು ಮಾತ್ರ ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಮೃತಳ ಅತ್ತೆ ರಾಧಾಬಾಯಿ ನಾಯಕ ಹಾಗೂ ನಾದಿನಿ ಕಲ್ಪನಾ ನಾಯಕ ಇಬ್ಬರನ್ನು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಲು ವಿಳಂಬ ಮಾಡಿದರು. ಈಗ ತನಿಖೆಯಲ್ಲೂ ವಿಳಂಬ ಧೋರಣೆ ತೋರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಮೃತಳ ಅತ್ತೆ, ಮಾವ ಹಾಗೂ ಇತರ ಸಂಬಂಧಿಕರನ್ನು ಸಾಕಷ್ಟು ವಿಚಾರಣೆ ನಡೆಸಿ, ಆರೋಪ ಸಾಬೀತಾದರೆ ಮಾತ್ರ ಬಂಧಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಅಂಕೋಲಾದ ಪ್ರಕರಣದಲ್ಲಿ ಮೃತಳ ಪತಿಯನ್ನು ಬಂಧಿಸಲಾಗಿದೆ. ತನಿಖೆ ನಡೆದಿದೆ. ಆರೋಪ ಸಾಬೀತಾದ ಬಳಿಕ ಇನ್ನಿಬ್ಬರನ್ನು ಬಂಧಿಸಲಾಗುವುದು. ಶಿವ ಪ್ರಕಾಶ ದೇವರಾಜು ಪೊಲೀಸ್ ವರಿಷ್ಠಾಧಿಕಾರಿ, ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net