ಇನ್ನೂ 10-15 ಪಾಸಿಟಿವ್ ಸಾಧ್ಯತೆ : ಜಿಲ್ಲಾಧಿಕಾರಿ ಆರ್.ಲತಾ ಮಾಹಿತಿ

24cbp3
Published on

ಚಿಕ್ಕಬಳ್ಳಾಪುರ : ಜಿಲ್ಲೆಯ ವಿವಿಧೆಡೆ ಇರುವ ಕ್ವಾರಂಟೈನ್ ಕೇಂದ್ರ ಮತ್ತು ಸೋಂಕು ಪತ್ತೆಯಾಗಿದ್ದ ವಿವಿಧ ವಾರ್ಡ್‌ಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ಚಿಕ್ಕಬಳ್ಳಾಪುರದ 17ನೇ ವಾರ್ಡ್, ಬಾಗೇಪಲ್ಲಿ ತಾಲೂಕಿನ ಚೆಕ್ ಪೋಸ್ಟ್, ಸೋಂಕಿತರೊಂದಿಗೆ ನೇರ ಮತ್ತು ದ್ವಿತೀಯ ಸಂಪರ್ಕಿಗಳನ್ನು ಇರಿಸಿರುವ ಕ್ವಾರಂಟೈನ್ ಕೇಂದ್ರ ಸೇರಿ ವಿವಿಧೆಡೆ ತೆರಳಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ ಎಲ್ಲರನ್ನು ಕ್ವಾರಂಟೈನಲ್ಲಿರಿಸಲಾಗಿದೆ. ವಲಸಿಗರಲ್ಲಿನ 99 ಸೋಂಕಿತರ ಪೈಕಿ ಗೌರಿಬಿದನೂರಿ 58 ಮತ್ತು ಬಾಗೇಪಲ್ಲಿಯ 41 ಮಂದಿ ಇದ್ದಾರೆ. ಪ್ರಸ್ತುತ 37 ಗಂಟಲು ದ್ರವ ಮಾದರಿಗಳ ವರದಿ ಬರಬೇಕಿದ್ದು, ಇದರಲ್ಲಿ ಕನಿಷ್ಠ 10 ರಿಂದ 15 ಫಾಸಿಟಿವ್ ಬರುವ ಸಾಧ್ಯತೆ ಇದೆ. ನೆಗಟಿವ್ ಬಂದವರನ್ನೂ ಕ್ವಾರಂಟೈನಲ್ಲಿರಿಸಿ, 12 ದಿನಗಳ ಬಳಿಕ ಮತ್ತೆ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ವಲಸಿಗರಿಗೆ ಜಿಲ್ಲೆಗೆ ಬರಲು ಜಿಲ್ಲಾಡಳಿತ ಅನುಮತಿ ಕೊಟ್ಟಿರಲಿಲ್ಲ. ಸರ್ಕಾರವು ಮಾನವೀಯತೆ ದೃಷ್ಟಿಯಿಂದ ಕ್ವಾರಂಟೈನಲ್ಲಿರಿಸಲು ಆದೇಶ ನೀಡಿದೆ. ಅದರಂತೆ ಯಾವುದೇ ವಲಸಿಗರನ್ನು ಜನರೊಂದಿಗೆ ಬೆರೆಯಲು ಬಿಟ್ಟಿಲ್ಲ. 8 ಬಸ್‌ಗಳಲ್ಲಿ ಬಂದವರನ್ನು ನೇರವಾಗಿ ಚಿಕ್ಕಬಳ್ಳಾಪುರದ ವಿಟಿಯು ಕೇಂದ್ರ, ಗೌರಿಬಿದನೂರು ಮತ್ತು ಬಾಗೇಪಲ್ಲಿ ಕ್ವಾರಂಟೈನಲ್ಲಿರಿಸಲಾಗಿದೆ ಎಂದರು.

ಸೋಂಕಿತರ ಪೈಕಿ ಎಲ್ಲರೂ ಆರೋಗ್ಯದಿಂದ್ದಾರೆ, ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು ಎರಡು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಕ್ವಾರಂಟೈನ್ ಕೇಂದ್ರ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಇತರರಿದ್ದರು.

ಗಂಭೀರ ಕಾಯಿಲೆ ರೋಗಿಗಳ ನಿಗಾ : ಎಚ್‌ಐವಿ, ಕಿಡ್ನಿ ವೈಫಲ್ಯ, ನ್ಯುಮೋನಿಯಾ ಸೇರಿ ಮಾರಕ ಕಾಯಿಲೆ ಇರುವ ರೋಗಿಗಳ ಮೇಲೆ ಹೆಚ್ಚಿನ ನಿಗಾ ವಹಿಸಿದ್ದು ಚಿಕಿತ್ಸೆಯ ವೇಳೆ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಇದರ ಮಹತ್ವದ ಬಗ್ಗೆ ಅರಿವಿನ ಜತೆಗೆ ಎಚ್ಚರಿಕೆ ವಹಿಸಲು ತಿಳಿಸಲಾಗುತ್ತಿದೆ. ಒಂದು ವೇಳೆ ಸೋಂಕು ಪತ್ತೆಯಾದಲ್ಲಿ ತ್ವರಿತ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಎರಡ ತಾಲೂಕು ಮುಕ್ತ, ಮತ್ತೆರಡು ಕಡೆ ಪತ್ತೆ : ಜಿಲ್ಲೆಯಲ್ಲಿ ಸೋಂಕಿತರನ್ನೊಳಗೊಂಡ ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ಕರೊನಾ ಮುಕ್ತ ತಾಲೂಕುಗಳೆನಿಸಿಕೊಂಡ ಖುಷಿ ಒಂದು ಕಡೆಯಾದರೆ ಈಗ ಮತ್ತೆರಡು ತಾಲೂಕುಗಳಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತ ವಲಸಿಗರನ್ನು ಹೊರತುಪಡಿಸಿದಂತೆ ಬಾಗೇಪಲ್ಲಿಯಲ್ಲಿ 1 ಪ್ರಕರಣ ಮತ್ತು ಚಿಂತಾಮಣಿಯಲ್ಲಿ 5 ಪ್ರಕರಣಗಳು ಸಕ್ರಿಯವಾಗಿದ್ದು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಾಗೇಪಲ್ಲಿ ಜಾಡು ಪತ್ತೆಗೆ ತನಿಖೆ : ಬಾಗೇಪಲ್ಲಿಯ ಗರ್ಭಿಣಿಗೆ ಸೋಂಕು ತಗುಲಿದ ಹಿನ್ನೆಲೆಯನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಮುಂದಾಗಿದೆ. ಈಗಾಗಲೇ ಮಹಿಳೆಯೊಂದಿಗೆ ನೇರ ಸಂಪರ್ಕದಲ್ಲಿದ್ದ ತಂದೆ, ತಾಯಿ ಹಾಗೂ ಪತಿಯನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ. ದ್ವಿತೀಯ ಸಂಪರ್ಕಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಗರ್ಭಿಣಿಯ ತಂದೆ ಮಕ್ಕಳಿಗೆ ತಾಯತ ಕಟ್ಟಿ ಮಂತ್ರ ಹಾಕುತ್ತಿದ್ದು ಇತ್ತೀಚೆಗೆ ಆಂಧ್ರದಿಂದ ಕೆಲ ಜನರು ಮನೆಗೆ ಬಂದು ಹೋಗಿದ್ದರು. ಇವರಿಂದ ಸೋಂಕು ತಗುಲಿರುವ ಇಲ್ಲವೇ ಆಕೆ ಚಿಕಿತ್ಸೆಗೆ ತೆರಳಿದಾಗ ಆಸ್ಪತ್ರೆಯಲ್ಲಿ, ಅಥವಾ ಸ್ಥಳೀಯರ ಸಂಪರ್ಕದಿಂದ ಸೋಂಕು ತಗುಲಿರುವ ಲೆಕ್ಕಚಾರದಲ್ಲಿ ಜಾಡು ಪತ್ತೆ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net