

ಯಲ್ಲಾಪುರ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಗಳು ಅಸ್ತಿತ್ವಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿವೆ ಎಂದು ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಉಲ್ಲಾಸ ಶಾನಭಾಗ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಲ್ಲಾಪುರದ ಸಮಿತಿ ರಾಜ್ಯದಲ್ಲೇ ಕ್ರಿಯಾಶೀಲ ಸಮಿತಿಯಾಗಿ ಗುರುತಿಸಿಕೊಂಡಿದೆ. ಯುವನಿಧಿ ಯೋಜನೆಯ ಲಾಭವನ್ನು ಹೆಚ್ಚಿನ ಯುವಕರು ಪಡೆದುಕೊಳ್ಳುವಂತೆ ಮಾಡಲು ಸಮರ್ಪಕ ಮಾಹಿತಿ ನೀಡುವ ಕಾರ್ಯಕ್ರಮವನ್ನು ಸದ್ಯದಲ್ಲೇ ಆಯೋಜಿಸಲಾಗುವುದು ಎಂದರು.
ಗೃಹಲಕ್ಷ್ಮಿಯೋಜನೆಯ ಹಣ ಎಲ್ಲರಿಗೂ ಸಮರ್ಪಕವಾಗಿ ಬಂದಿಲ್ಲ. ಕೆಲವರಿಗೆ ಬಂದಿಲ್ಲ, ಕೆಲವರಿಗೆ ಬಂದಿದೆ. ಇದಕ್ಕೆ ಕಾರಣವೇನು ಎಂದು ಸದಸ್ಯರು ಪ್ರಶ್ನಿಸಿದರು.
ವಿವಿಧ ಗ್ಯಾರಂಟಿ ಯೋಜನೆಗಳ ಪ್ರಗತಿ ಕುರಿತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಎಲ್ಲರಿಗೂ ಜಮಾ ಆಗಲಿದೆ ಎಂದು ಸಿಡಿಪಿಒ ಶ್ರೀದೇವಿ ಪಾಟೀಲ ಮಾಹಿತಿ ನೀಡಿದರು.
ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಸಮಿತಿಯ ಸದಸ್ಯರಾದ ಟಿ.ಸಿ. ಗಾಂವ್ಕರ, ಮಹೇಶ ನಾಯ್ಕ, ಅನಿಲ ಮರಾಠೆ, ಅನಂತ ಗೌಡ, ನಾಗರಾಜ ಕೈಟ್ಕರ್, ತಾಪಂ ಇಒ ರಾಜೇಶ ಧನವಾಡಕರ ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿದ್ದರು.