ಇದ್ದೂ ಇಲ್ಲದಂತಾಗಿರುವ ಹೈಮಾಸ್ಟ್ ದೀಪ

jul 11ss 1 mask light
Published on

ಕೊಡಗು: ಶನಿವಾರಸಂತೆಯ ಕೆ.ಆರ್.ಸಿ. ವೃತ್ತದಲ್ಲಿ ಎಂಟು ವರ್ಷದ ಹಿಂದೆ ಅಳವಡಿಸಿದ್ದ ಹೈಮಾಸ್ಟ್ ದೀಪ ಇದೀಗ ಇದ್ದೂ ಇಲ್ಲದಂತಾಗಿದ್ದು, ಜನತೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ಪ್ರಾರಂಭದದಲ್ಲಿ ಶನಿವಾರಸಂತೆಯನ್ನು ಕಂಗೊಳಿಸುವಂತೆ ಮಾಡಿದ್ದ ಈ ದೀಪ ಒಂದು ತಿಂಗಳಿನಿಂದ ಕೆಟ್ಟು ನಿಂತಿದೆ. ಆದರೆ, ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಸಂಬಂಧಿಸಿದ ಗ್ರಾಮ ಪಂಚಾಯಿತಿ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿ ಸರಿಪಡಿಸಲು ಪ್ರಯತ್ನಿಸಿತಾದರು ಪ್ರಯೋಜನವಾಗಿಲ್ಲ. ಅಲ್ಲದೇ ದೀಪ ಅಳವಡಿಸಿದ ಕಂಪನಿ ಸಿಬ್ಬಂದಿಯೇ ಮಂಗಳೂರಿನಿಂದ ಬಂದು ಸರಿಪಡಿಸಬೇಕೆಂಬ ಉತ್ತರವನ್ನು ಪಂಚಾಯಿತಿ ನೀಡಿ ಒಂದು ತಿಂಗಳಿನಿಂದ ಮೌನವಾಗಿದೆ.

ಈ ವೃತ್ತದಲ್ಲಿ ದೀಪ ಇಲ್ಲದಿರುವುದರಿಂದ ನಿತ್ಯ ರಾತ್ರಿ ವೇಳೆ ಅಪಘಾತ ಸಂಭವಿಸುತ್ತಿದೆ. ಈ ವೃತ್ತದ ಮೂಲಕವೇ ಬೆಂಗಳೂರು, ಮೈಸೂರು, ಮಂಗಳೂರು, ಹಾಸನ ಸೇರಿದಂತೆ ಇತರ ಸ್ಥಳಗಳಿಗೆ ಹೋಗಬೇಕಿದೆ. ನಿತ್ಯ ನೂರಾರು ವಾಹನಹಳು ರಾತ್ರಿ ವೇಳೆಯಲ್ಲಿ ಈ ವೃತ್ತವನ್ನು ಹಾದು ಹೋಗಲಿದ್ದು, ದೂರದ ನಗರಗಳಿಗೆ ತೆರಳುವವರು ಬಸ್‌ಗಾಗಿ ಇದೇ ವೃತ್ತದಲ್ಲಿ ಕಾದು ನಿಲ್ಲುತ್ತಾರೆ. ಹಾಗಾಗಿ ಅವಘಢ ಸಂಭವಿಸುವ ಮುನ್ನ ಸಂಬಂಧಪಟ್ಟವರು ಇತ್ತ ಗಮನಹರಿಸಲಿ ಎಂಬುದು ಸ್ಥಳೀಯರು ಹಾಗು ಸಾರ್ವಜನಿಕರ ಒತ್ತಾಯವಾಗಿದೆ.

ಕೆಟ್ಟು ನಿಂತಿರುವ ಹೈಮಾಸ್ಟ್ ದೀಪವನ್ನು ಗ್ರಾಮ ಪಂಚಾಯಿತಿ ಸರಿಪಡಿಸಬೇಕಿದೆ. ಸಾವಿರಾರು ರೂ. ವೆಚ್ಚ ಮಾಡಿ ಅಳವಡಿಸಿರುವ ಹೈಮಾಸ್ಟ್ ದೀಪ ಇದೀಗ ಕೆಟ್ಟು ಹೋಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಂಬಂಧಪಟ್ಟವರು ಶೀಘ್ರ ಕ್ರಮ ವಹಿಸಲಿ.
ಬಶೀರ್ ವರ್ತಕ, ಶನಿವಾರಸಂತೆ

ಶನಿವಾರಸಂತೆಗೆ ಒಂದು ಹೈಮಾಸ್ಟ್ ದೀಪ ಬೇಕೆಂದು ಅಂದಿನ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರಿಗೆ ನಾನು ಅಧ್ಯಕ್ಷೆಯಾಗಿದ್ದಾಗ ಮನವಿ ಮಾಡಿದ್ದೆ. ಅದರಂತೆ ದೀಪ ನೀಡಿದ್ದರು. ಈ ವಿಚಾರದಲ್ಲಿ ತೊಂದರೆ ಎದುರಾದಾಗ ತಕ್ಷಣ ಸ್ಪಂದಿಸಿ ಸರಿಪಡಿಸುತಿದ್ದೆ. ಆದರೆ ಇದೀಗ ಕೆಟ್ಟು ತಿಂಗಳಾದರೂ ಡಿಸದಿರುವುದು ದುರಂತ. ವೃತ್ತದಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ದೀಪ ಇದು.
ಭುವನೇಶ್ವರಿ ಹರೀಶ್ ಮಾಜಿ ಅಧ್ಯಕ್ಷೆ, ಶನಿವಾರಸಂತೆ ಗ್ರಾಪಂ

ಈ ದೀಪ ಕೆಟ್ಟು ಹೋಗಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ವಿಜಯವಾಣಿಯಿಂದಾಗಿ ಈಗ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟವರಿಂದ ಮಾಹಿತಿ ತರಿಸಿಕೊಂಡು ಸರಿಪಡಿಸುವಂತೆ ಸೂಚಿಸಲಾಗಿದೆ. ಸ್ಥಳೀಯವಾಗಿ ಇದನ್ನು ದುರಸ್ತಿ ಮಾಡುವವರಿಲ್ಲ. ಹೀಗಾಗಿ ಮಂಗಳೂನಿಂದ ಬಂದು ಸರಿಪಡಿಸಬೇಕಾಗಿದೆ. ಶೀಘ್ರ ಕ್ರಮ ವಹಿಸಲಾಗುವುದು.
ಫರ್ಜಾನ ಬಾನು ಶಾಹೀದ್ ಖಾನ್ ಅಧ್ಯಕ್ಷೆ ಶನಿವಾರಸಂತೆ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net