ಇದ್ದುದ್ದನ್ನು ಇದ್ದಂತೆಯೇ ತೋರಿಸುವ ನೈಜ ಕಲೆ ರಂಗಭೂಮಿ

mysore
Published on

ಮೈಸೂರು: ಸಂಚಲನ ಮೈಸೂರು ಮತ್ತು ಬಳ್ಳಾರಿಯ ಸಿರಿಗೇರಿ ಧಾತ್ರಿ ರಂಗಸಂಸ್ಥೆ ಸಹಯೋಗದಲ್ಲಿ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ 3 ದಿನಗಳ ಸಂಚಲನ ರಂಗೋತ್ಸವ ಗುರುವಾರ ಸಂಪನ್ನಗೊಂಡಿತು

ರಂಗೋತ್ಸವದ ಸಮಾರೋಪದ ಬಳಿಕ ವಿ.ಎನ್.ಅಶ್ವತ್ಥ್ ರಚನೆಯ ಭೀಮೇಶ್ ಎಚ್.ಎನ್.ದಾವಣಗೆರೆಯ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಶ್ರೀಕೃಷ್ಣ ಸಂಧಾನ ನಾಟಕ ರಂಗ ಪ್ರೇಮಿಗಳನ್ನು ನಗೆಗಡಲಲ್ಲಿ ತೇಲಿಸಿತು.

ನಾಟಕ - ಭಾಷಾಶುದ್ಧಿ ಇಲ್ಲದಿದ್ದರೆ, ’ಅ’ಕಾರ ’ಹ’ಕಾರದ ವ್ಯತ್ಯಾಸ ಗೊತ್ತಿಲ್ಲದಿದ್ದರೆ, ಪೌರಾಣಿಕ ನಾಟಕ ಹೇಗೆ ಆಭಾಸವಾಗುತ್ತದೆ ಎಂದು ತೋರಿಸುವ ಅಪ್ಪಟ ಹಾಸ್ಯ ನಾಟಕವು ಮೆಚ್ಚುಗೆಗೆ ಪಾತ್ರವಾಯಿತು.

ಇದಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಸಿನಿಮಾ ನೋಡುವುದಕ್ಕಿಂತ ಇಂತಹ ರಂಗಭೂಮಿ ನಾಟಕವನ್ನು ನೋಡುವುದರಿಂದ ನಮ್ಮ ಬದುಕಿನಲ್ಲಿ ವಿಶೇಷವಾದ ಸಂಚಲನ ಮೂಡುತ್ತದೆ. ಸಿನಿಮಾ ದೊಡ್ಡದನ್ನು ಸಣ್ಣದಾಗಿ, ಟಿವಿ ಸಣ್ಣದನ್ನು ದೊಡ್ಡದಾಗಿ ತೋರಿಸಿದರೆ ರಂಗಭೂಮಿ ಇದ್ದುದನ್ನು ಇದ್ದಂತೆಯೇ ತೋರಿಸುವ ನೈಜ ಕಲೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಮಾತನಾಡಿ, ರಂಗಭೂಮಿ ಕ್ರಿಯಾಶೀಲತೆ ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಿದೆ. ನಗರ ಪ್ರದೇಶ ಮಾತ್ರವಲ್ಲದೇ ಗ್ರಾಮಾಂತರ ಪ್ರದೇಶದ ಮಹಿಳೆಯರು ಮಕ್ಕಳಿಗೆ ರಂಗ ತರಬೇತಿ ನೀಡುತ್ತಿರುವ ದೀಪಕ್ ಮೈಸೂರು ಅವರ ಕಾರ್ಯ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೂರ್ಣಿಮಾ ಆಸ್ಪತ್ರೆಯ ಡಾ.ಪೂರ್ಣಿಮಾ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳನ್ನು ರಂಗಭೂಮಿಯತ್ತ ಸೆಳೆಯಲು ಸಂಚಲನ ಮೈಸೂರು ತಂಡ ಕಾರ್ಯಕ್ರಮ ರೂಪಿಸುವುದು ಸ್ವಾಗತಾರ್ಹ. ಮುಂಬರುವ ದಿನಗಳಲ್ಲಿ ರಂಗಚಟುವಟಿಕೆಗಳ ಮೂಲಕ ಆರೋಗ್ಯ ಜಾಗೃತಿ ಮೂಡಿಸಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಮಲ್ಲಿಕಾರ್ಜುನಸ್ವಾಮಿ, ಸಂಚಲನ ಮೈಸೂರು ಅಧ್ಯಕ್ಷ ದೀಪಕ್ ಮೈಸೂರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net