ಇದೇನ್ರೀ ಇಷ್ಟೊಂದು ಅವ್ಯವಸ್ಥೆ..!

Kudligi navoday school visit to MLA srinivas
ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕಳಪೆ ಆಹಾರ ನೀಡುತ್ತಿರುವುದನ್ನು ಗಮನಿಸಿದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಡುಗೆ ತಯಾರಕರನ್ನು ತರಾಟೆಗೆ ತೆಗೆದುಕೊಂಡರು.
Published on

ಕೂಡ್ಲಿಗಿ: ಚಿಕ್ಕಜೋಗಿಹಳ್ಳಿ ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ನೀಡುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಪ್ರಾಚಾರ್ಯ ಹಾಗೂ ಅಡುಗೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ವನಮಹೋತ್ಸವ ಕಾರ್ಯಕ್ರಮದ ನಂತರ ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಇಲ್ಲದಿರುವುದು, ನೊಣಗಳು ಆಹಾರ ಸಾಮಗ್ರಿಗಳಿಗೆ ಮುತ್ತಿದ್ದನ್ನು ಕಂಡರು. ಪಲಾವ್‌ನಲ್ಲಿ ತರಕಾರಿ ಇರಲಿಲ್ಲ. ಅಕ್ಕಿ ಕಳಪೆಯಾಗಿದ್ದು, ವಾಸನೆ ಬರುತ್ತಿತ್ತು. ಚಪಾತಿ ಹಿಟ್ಟು ಕಲಿಸುವ ಯಂತ್ರ ಸ್ವಚ್ಛವಾಗಿರಲಿಲ್ಲ ಹಾಗೂ ತುಕ್ಕು ಕೂಡ ಹಿಡಿದಿತ್ತು. ಹೊಸಪೇಟೆ ಎಸಿ ವಿವೇಕಾನಂದ ಅವರಿಗೆ ಫೋನ್ ಮಾಡಿ ಈ ಕುರಿತು ಪರಿಶೀಲಿಸಿ ಕ್ರಮವಹಿಸುವಂತೆ ಸೂಚಿಸಿದರು. ಅವ್ಯವಸ್ಥೆ ಬಗ್ಗೆ ದೂರು ಹೇಳಿದರೆ ಉಪ ಪ್ರಾಚಾರ್ಯೆ ಬೈಯ್ಯುತ್ತಾರೆ ಎಂದು ಪಾಲಕರು ಶಾಸಕರ ಬಳಿ ಅವಲತ್ತು ಕೊಂಡರು.

ಆಹಾರ ಸರಿಯಾಗಿ ಬೇಯಿಸದ ಕಾರಣ ವಿದ್ಯಾರ್ಥಿಗಳು ತಿನ್ನದೆ ಹೊರಗೆ ಚೆಲ್ಲಿದ್ದನ್ನು ನೋಡಿ ಪ್ರಾಚಾರ್ಯ ಸುದೇಶ್ ಗೋಪಾಲ ಮಂಜುರೇ ಅವರಿಗೆ ಅವ್ಯವಸ್ಥೆ ತೋರಿಸಿ ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾಲಯದ ರಸ್ತೆ ಪಕ್ಕದಲ್ಲಿರುವ ಚರಂಡಿಗಳು ಸ್ವಚ್ಛತೆ ಇಲ್ಲದೆ ಕಸಕಡ್ಡಿಗಳಿಂದ ತುಂಬಿದ್ದವು. ನವೋದಯ ವಿದ್ಯಾಲಯಕ್ಕೆ ಅದರದೇ ಆದ ಘನತೆ ಇದ್ದು, ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅದಕ್ಕೆ ಪೂರಕವಾಗಿ ಕರ್ತವ್ಯ ಪಾಲನೆ ಮಾಡಬೇಕೆಂದು ಸೂಚನೆ ಶಾಸಕ ನೀಡಿದರು.

ಗ್ರಾಪಂ ಅಧ್ಯಕ್ಷ ಎಂ.ಸಿ. ಅಶೋಕ ನಾಯ್ಕ, ಎಪಿಎಂಸಿ ಅಧ್ಯಕ್ಷ ಎಂ.ಮುತ್ತೆಪಾಲಯ್ಯ, ಪಿಡಿಒ ಭರತ್ ಕುಮಾರ್, ಗ್ರಾಪಂ ಸದಸ್ಯರಾದ ರಾಜೇಶ ನಾಯ್ಕ, ಒಬಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net