ಇದೇ ಕೊನೆಯ ಚುನಾವಣೆ ಎಂದ ಎಂ.ಟಿ.ಕೃಷ್ಣಪ್ಪ

02
Published on

ತುರುವೇಕೆರೆ: ಪಟ್ಟಣದ ಕೆ.ಹಿರಣ್ಣಯ್ಯ ಬಯಲುರಂಗ ಮಂದಿರದಲ್ಲಿ ಸಹಸ್ರಾರು ಕಾರ್ಯಕರ್ತರ ಜತೆ ಶುಕ್ರವಾರ ಜೆಡಿಎಸ್​ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕೇಕ್​ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು.

ತೆರೆದ ವಾಹನದಲ್ಲಿ ಎಂ.ಟಿ.ಕೃಷ್ಣಪ್ಪ ಅವರನ್ನು ಮೆರವಣಿಗೆ ಮೂಲಕ ಕರೆತಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬಾಣಸಂದ್ರ ವೃತ್ತದಲ್ಲಿ ಜಮಾಯಿಸಿ ಕ್ರೇನ್​ ಮೂಲಕ ಬೃಹತ್​ ಗಾತ್ರದ ಸೇಬಿನ ಹಾರ ಹಾಕಿ ಸಂಭ್ರಮಿಸಿದರು. ಅಲ್ಲದೆ ಜೆಸಿಬಿಗಳಲ್ಲಿ ಹೂವಿನ ಮಳೆ ಸುರಿಸಿ ಕೆ.ಹಿರಣ್ಣಯ್ಯ ಬಯಲು ಮಂದಿರಕ್ಕೆ ಕರೆತಂದರು.

ಇದೇ ಕೊನೆಯ ಚುನಾವಣೆ: ಮುಂಬರುವ ವಿಧಾನಸಭೆ ಚುನಾವಣೆ ನನಗೆ ಕಡೆಯ ಚುನಾವಣೆಯಾಗಿದೆ ಎಂದು ಎಂ.ಟಿ.ಕೃಷ್ಣಪ್ಪ ಹೇಳಿದರು. ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತದಲ್ಲಿ ರೈತರಿಗೆ ಉತ್ತಮ ಯೋಜನೆ ಸಿಕ್ಕಿಲ್ಲ. ರಾಜ್ಯದಲ್ಲಿ ಜೆಡಿಎಸ್​ ಕೈಗೊಂಡ ಜನತಾ ಜಲಧಾರೆಯಲ್ಲಿ ಸುಮಾರು 10ಲಕ್ಷ ಜನರು ಸೇರಿ ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಆಡಳಿತಕ್ಕೆ ಬರಬೇಕಿದೆ ಎಂಬ ಸಂದೇಶ ನೀಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್​ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.

ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ: ಬೆಳಗ್ಗೆ 10 ಗಂಟೆಯಿಂದಲೇ ಆದಿ ಚುಂಚನಗಿರಿ ಆಸ್ಪತ್ರೆ ಹಾಗೂ ಕಿದ್ವಾಯಿ, ಜಯದೇವ ಹೃದ್ರೋಗ ಹಾಗೂ ಒಕ್ಕಲಿಗರ ದಂತ ಆಸ್ಪತ್ರೆ ಸಹಯೋಗದಲ್ಲಿ ಬೃಹತ್​ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಸಾವಿರಾರು ಜನರು ಶಿಬಿರದ ಪ್ರಯೋಜನ ಪಡೆದರು. ಅಲ್ಲದೆ ನೂರಾರು ಜೆಡಿಎಸ್​ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರಗತಿಪರ ರೈತರು, ನಿವೃತ್ತ ಯೋಧರು ಹಾಗೂ ಹಿರಿಯ ಜೆಡಿಎಸ್​ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಭರ್ಜರಿ ಬಾಡೂಟ: ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಮಾಂಸಹಾರ ಹಾಗೂ ಸಸ್ಯಾಹಾರದ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಡಿಸಿಸಿ ಬ್ಯಾಂಕ್​ ಮಾಜಿ ನಿರ್ದೇಶಕ ಬಿ.ಎಸ್​.ದೇವರಾಜು ಹಾಗೂ ತಾವರೆಕೆರೆ ತಿಮ್ಮೇಗೌಡ ಬಿಜೆಪಿ ತೊರೆದು ಜೆಡಿಎಸ್​ ಸೇರ್ಪಡೆಗೊಂಡರು. ಯುವ ಜನತಾದಳದ ತಾಲೂಕು ಅಧ್ಯಕ್ಷ ಬಾಣಸಂದ್ರರಮೇಶ್​, ವಕ್ತಾರ ವೆಂಕಟಾಪುರ ಯೋಗೀಶ್​, ಎಂ.ಟಿ.ಕೆ ಪತ್ನಿ ಸರಳಾ, ಮುಖಂಡರಾದ ರಮೇಶ್​ಗೌಡ, ಶಂಕರೇಗೌಡ, ವಕೀಲ ಧನಪಲ್​, ದೊಡ್ಡಾಟ್ಟಚಂದ್ರೇಶ್​, ಕುಶಾಲ್​ ಕುಮಾರ್​, ಎ.ಬಿ.ಜಗದೀಶ್​, ಚಂದ್ರೇಗೌಡ, ಯೋಗಾನಂದ್​, ಮಲ್ಲಿಕಾರ್ಜುನರಾಜು, ಬಿ.ವಿ.ರಾಮಚಂದ್ರ, ದುಶ್ಯಂತ್​, ಮಂಜಪ್ಪ, ಎನ್​.ಆರ್​.ಸುರೇಶ್​, ಮಲ್ಲೂರುತಿಮ್ಮೇಶ್​, ಮೂರ್ತಣ್ಣ, ರಾಜೀವ್​, ವೆಂಕಟೇಶ್​, ಜಪ್ರುಲ್ಲಾಖಾನ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net