

ರಾಮನಗರ: ಹಿಜಾಬ್ ಮತ್ತು ಕೇಸರಿ ವಿವಾದ ಹೇಗೆ ಪ್ರಾರಂಭ ಆಯಿತು. ಯಾವ ರಾಷ್ಟ್ರೀಯ ಪಕ್ಷಗಳ ಅಧೀನದಲ್ಲಿರುವ ಸಂಘಟನೆಗಳು ಇದರ ಹಿಂದಿವೆ, ಇದು ಯಾರ ಹಿಡನ್ ಅಜೆಂಡಾ ಎಂಬುದರ ಸಂಪೂರ್ಣ ಮಾಹಿತಿ ಗೊತ್ತಿದೆ. ಆ ವಿಚಾರವಾಗಿ ಚರ್ಚೆ ಮಾಡಿ ಸತ್ಯ ಹೇಳಿದರೆ ನಾನೇ ಖಳನಾಯಕ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ರಾಮನಗರದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ಸಂಘಟನೆಗಳು ರಾಜ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುತ್ತಿವೆ. ನಾಡಿನಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ನೆಲೆಸಬೇಕಾದರೆ ಸರ್ಕಾರ, ವಿವಾದದ ಹಿಂದಿರುವ ಯಾವುದೇ ಸಂಘಟನೆಗಳಾಗಲಿ ಅವುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ದಕ್ಷಿಣ ಕನ್ನಡ, ಉಡುಪಿ, ಕರಾವಳಿ ಪ್ರದೇಶ ಸೇರಿ ಹಲವು ಜಿಲ್ಲೆಗಳಲ್ಲಿ ವಿವಾದ ಭುಗಿಲೇಳುತ್ತಿದೆ. ಆರಂಭದಲ್ಲೇ ಇದಕ್ಕೆ ಬ್ರೇಕ್ ಹಾಕಿದ್ದರೆ ಬೇರೆ ಜಿಲ್ಲೆಗಳಿಗೆ ಹಬ್ಬುತ್ತಿರಲಿಲ್ಲ. ಇದರಲ್ಲಿ ರಾಜ್ಯ ಸರ್ಕಾರದ ವೈಫಲ್ಯವಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಬೆಲೆ ಏರಿಕೆ ಜತೆಗೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ವಿಷಯವಾಗಿ ಚರ್ಚೆ ಮಾಡಲು ಸರಕು ಇಲ್ಲ. ಹೀಗಾಗಿಯೇ ಇಂತಹ ಸೂಕ್ಷ್ಮ ವಿಚಾರಗಳನ್ನು ವಿವಾದಗಳನ್ನಾಗಿ ಸೃಷ್ಟಿಸಿ ಜನಸಾಮಾನ್ಯರ ಮುಗ್ಧತನವನ್ನು ಬೇರೆಡೆ ಸೆಳೆದು ಅನುಕೂಲ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನೆರಡು ತಿಂಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ. ಆದರೀಗ ಹಿಜಾಬ್-ಕೇಸರಿ ವಿಚಾರದಲ್ಲಿ ಮಕ್ಕಳಲ್ಲಿ ದ್ವೇಷ ಭಾವನೆ ಬಿತ್ತಿ ವೈಮನಸ್ಸು ಮೂಡಿಸುತ್ತಿದ್ದಾರೆ. ಈ ಮೂಲಕ ಮಕ್ಕಳ ಭವಿಷ್ಯ ಹಾಳು ಮಾಡಲಾಗುತ್ತಿದೆ ಎಂದು ಎಚ್‌ಡಿಕೆ ಬೇಸರಿಸಿದರು.
ಸ್ಪಷ್ಟನೆ: ನಾನು ಹಸಿರು ಶಾಲಿನ ಬಗ್ಗೆ ಪ್ರಚೋದನೆ ಕೊಟ್ಟಿಲ್ಲ. ಮಕ್ಕಳ ಭವಿಷ್ಯದ ಮೇಲಾಗುವ ಪರಿಣಾಮ ಅರಿಯದಿದ್ದರೆ ದೊಡ್ಡ ಅನಾಹುತ ಆಗುತ್ತದೆ. ನಾವು ರೈತ ಕುಟುಂಬದವರು, ಅದನ್ನು ತೋರಿಸೋಣ ಎಂದಿದ್ದೇನೆ. ಹಸಿರು ಶಾಲು ಹಾಕಿಕೊಳ್ಳೋಣ ಎಂದಿದ್ದೇನೆ. ನನ್ನದು ಪ್ರಚೋದನೆ ಅಲ್ಲ. ಹಸಿರು ಶಾಲು ರೈತನ ಸಂಕೇತ, ಅದಕ್ಕೆ ಗೌರವವಿದೆ. ಇವರು ಮಾಡುತ್ತಿರುವುದಕ್ಕೆ ಏನು ಗೌರವ ಇದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನರ ಸಮಸ್ಯೆ ಬಗೆಹರಿಸುವ ಬದ್ಧತೆ ಇಲ್ಲ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಈ ನಾಡು ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಶಾಂತಿಯುತ ವಾತಾವರಣ ಇತ್ತು. ಅದನ್ನು ಹಾಳು ಮಾಡಿ ಅಶಾಂತಿ ವಾತಾವರಣ ಉಂಟಾಗಬೇಕೆಂಬ ಉದ್ದೇಶದಿಂದಲೇ ವಿವಾದ ಸೃಷ್ಟಿಸಲಾಗಿದೆ. ಎಲ್ಲ ವರ್ಗದ ಬಡವರ ಪರವಾಗಿ ಹೋರಾಟ ಮಾಡುವಂತೆ ಎಲ್ಲ ಸಮಾಜದವರಿಗೂ ಹೇಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಅಂಗವಿಕಲೆಗೆ ಎಚ್‌ಡಿಕೆ ಭರವಸೆ: ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ರಾಮನಗರದ ಅಂಗವಿಕಲ ಯುವತಿ ಸುಮಲತಾ, ಭವಿಷ್ಯದ ದೃಷ್ಟಿಯಿಂದ ಉದ್ಯೋಗ ಕೊಡಿಸುವಂತೆ ಮನವಿ ಮಾಡಿದರು. ಆಕೆಯಿಂದ ವ್ಯಾಸಂಗದ ಮಾಹಿತಿ ಪಡೆದು ಕೆಲಸ ಕೊಡಿಸುವ ಭರವಸೆ ನೀಡಿದರು.