

ಕೋಲಾರ: ಕಿಷ್ಕಿಂದೆಯಂತಿರುವ ಕೋಲಾರದ ಉಪಕಾರಾಗೃಹದಲ್ಲಿ ಪ್ರಾಣಿಗಳನ್ನು ಕೂಡಿಹಾಕುವ ರೀತಿ ಕೈದಿಗಳನ್ನು ಇರಿಸಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೈಕೋರ್ಟ್ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಬಿ.ವೀರಪ್ಪ ರೆಡ್ಡಿ ತಿಳಿಸಿದರು.
ನಗರದ ಕೋಟೆ ಪ್ರದೇಶದಲ್ಲಿರುವ ಉಪಕಾರಾಗೃಹಕ್ಕೆ ಶುಕ್ರವಾರ ದಿಢೀರನೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, 1868ರಲ್ಲಿ ನಿರ್ಮಿಸಿರುವ ಉಪಕಾರಾಗೃಹದಲ್ಲಿ ಪ್ರಸ್ತುತ 134 ಕೈದಿಗಳಿದ್ದು, ಅಗತ್ಯಕ್ಕನುಗುಣವಾಗಿ ಕೊಠಡಿಗಳಿಲ್ಲ. 5ರಿಂದ 10 ಜನರಿರಬೇಕಾದ ಕೊಠಡಿಯೊಂದರಲ್ಲಿ 25 ಕೈದಿಗಳನ್ನು ಇಡಲಾಗಿದೆ. ಅವರು ಮಲುಗಲು ಸಹ ಆಗದ ಸ್ಥಿತಿ ಅಲ್ಲಿದೆ. ಇನ್ನು ಸ್ನಾನ, ಶೌಚಗೃಹಗಳ ಕೊರತೆಯಿದೆ. 5*10ಅಡಿ ಅಗಲದ ಕೊಠಡಿಯಲ್ಲಿ ಅಡುಗೆ ಮನೆ ಇದ್ದು, ತರಕಾರಿ, ಧಾನ್ಯ ಸಂಗ್ರಹಕ್ಕೂ ಸ್ಥಳಾವಕಾಶವಿಲ್ಲ. ಕೈದಿಗಳ ಮನ@ಪರಿವರ್ತನೆಗೆ ಅಗತ್ಯವಾದ ಯೋಗ, ಧ್ಯಾನ ಮಾಡಲು ಸ್ಥಳವಿಲ್ಲ. ಓದಲು ಸರಿಯಾಗಿ ಲೈಬ್ರೆರಿ ಇಲ್ಲ. ಪರಿಸ್ಥಿತಿ ಇಷ್ಟು ದಾರುಣವಾಗಿದ್ದರೂ ಸರ್ಕಾರ ಏಕೆ ಹೊಸ ಕಟ್ಟಡ ಕಟ್ಟುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಜೈಲಿನ ಸ್ಥಿತಿಗತಿ ಕುರಿತಾದ ವರದಿಯನ್ನು ಸರ್ಕಾರಕ್ಕೆ ಕೊಡಲಾಗುವುದು. ತ್ವರಿತ ಗತಿಯಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ರಿಟ್ ಅರ್ಜಿ ಹಾಕಿ ಹೊಸಕಟ್ಟಡ ನಿಮಾರ್ಣಕ್ಕೆ ಸೂಚಿಸಲಾಗುವುದು. ಏಕೆಂದರೆ ಕೈದಿಗಳನ್ನು ಅಮಾನವೀಯವಾಗಿ, ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಈ ರೀತಿ ಕೈದಿಗಳನ್ನು ನಡೆಸಿಕೊಳ್ಳುವುದು ಮಾನವಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ ಎಂದು ಹೇಳಿದರು.
ಜೈಲು ಅಧಿಕಾರಿ ಮೋಹನ್ಕುಮಾರ್ ಮಾತನಾಡಿ, ಹೊಸ ಜೈಲು ಕಟ್ಟಡ ನಿಮಾರ್ಣಕ್ಕೆ ಸ್ಥಳ ಗುರುತಿಸಲಾಗಿದ್ದು, ಸರ್ಕಾರ 10 ಎಕರೆ ಮಂಜೂರು ಮಾಡಿದೆ. ಅದರ ಅಭಿವೃದ್ಧಿ ಹೊಣೆ ಲೋಕೋಪಯೋಗಿ ಇಲಾಖೆ ಹೊತ್ತಿದ್ದು, ಕಾಮಗಾರಿ ಕೈಗೆತ್ತಿಕೊಳ್ಳುವಲ್ಲಿ ವಿಳಂಬವಾಗಿದೆ ಎಂದು ತಿಳಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಕಾರ್ಯದರ್ಶಿ ಸಿ.ಎಚ್.ಗಂಗಾಧರ್, ವಕೀಲರ ಸಂಘ ಜಿಲ್ಲಾಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ರಘುಪತಿಗೌಡ, ಅಡಿಷನಲ್ ಎಸ್ಪಿ ಸಚಿನ್ ಘೋರ್ಪಡೆ, ವೃತ್ತ ನಿರೀಕ್ಷಕ ರಾವೇಂದ್ರ ಪ್ರಕಾಶ್, ವೃತ್ತ ನಿರೀಕ್ಷಕ ಅಣ್ಣಯ್ಯ ಇತರರು ಇದ್ದರು.
ಪರಿವರ್ತನೆ ಹೊಂದಿ: ಜೈಲು ಆವರಣದಲ್ಲಿ ಕೈದಿಗಳನ್ನುದ್ದೇಶಿಸಿ ಮಾತನಾಡಿದ ನ್ಯಾಯಾಧೀಶ ವೀರಪ್ಪ, ತಿಳಿವಳಿಕೆ ಕೊರತೆ, ಸಂದರ್ಭಾನುಸಾರವೋ ತಪ್ಪೆಸಗಿ ಜೈಲಿಗೆ ಬಂದಿದ್ದೀರಿ. ಪರಿವರ್ತನೆಗೆ ಇದೊಂದು ಒಳ್ಳೆಯ ಅವಕಾಶ. ಶ್ರೀಕೃಷ್ಣ ಪರಮಾತ್ಮ ಜೈಲಲ್ಲೇ ಹುಟ್ಟಿದರೆ, ಮಹಾತ್ಮಾ ಗಾಂಧಿ, ಅಂಬೇಡ್ಕರ್, ಸರ್ದಾರ್ ವಲ್ಲಭಭಾಯ್ ಪಟೇಲ್, ಸುಭಾಸ್ಚಂದ್ರ ಬೋಸ್ ಸೇರಿ ಅನೇಕ ಮಹನೀಯರು ಜೈಲು ಸೇರಿ ನಮಗೆ ಸ್ವಾತಂತ್ರ$್ಯ ತಂದುಕೊಟ್ಟರು. ಇದನ್ನೆಲ್ಲ ಅರಿತು, ಗ್ರಂಥಾಲಯದಲ್ಲಿ ಇಂತಹ ಮಹನೀಯರ ಕುರಿತಾದ ಪುಸ್ತಕಗಳಿದ್ದರೆ ಅವುಗಳನ್ನು ಪಡೆದು ಓದಬೇಕು. ಸನ್ನಡತೆ ಬಂದರೆ ಜೈಲಿಂದ ಹೊರಬರಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ಪೊಲೀಸ್ ಆಗಿದ್ದರೂ ಸಂಸ್ಕಾರವಿಲ್ಲ: ನ್ಯಾಯಾಧೀಶರ ಗನ್ಮ್ಯಾನ್ ಆಗಿದ್ದು, ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿರುವ ವೇಣುಗೋಪಾಲ್ ಮಾತನಾಡಿ, ನನ್ನದಲ್ಲದ ತಪ್ಪಿಗೆ ಜೈಲು ಸೇರಿದ್ದೇನೆ. ಎಲ್ಲರು ಸೇರಿ ನನಗೆ ಮೋಸ ಮಾಡಿದ್ದಾರೆ. ನ್ಯಾಯಾಲಯದಲ್ಲಿ 5 ತಿಂಗಳಿಂದ ವಿಚಾರಣೆ ಕೈಗೆತ್ತಿಕೊಂಡಿಲ್ಲ ಎಂದು ಏರು ದನಿಯಲ್ಲಿ ಹೇಳಿದಾಗ ಪೊಲೀಸ್ ಪೇದೆಯಾಗಿದ್ದರೂ ಯಾವ ರೀತಿ ನಡೆದುಕೊಳ್ಳಬೇಕೆಂಬ ಸಂಸ್ಕಾರ ಏಕೆ ಕಲಿಯಲಿಲ್ಲ. ವಕೀಲರ ಮೂಲಕ ನ್ಯಾಯ ಪಡೆಯಬೇಕೆಂಬ ಅರಿವು ನಿನಗಿಲ್ಲವೇ ಎಂದು ಪ್ರಶ್ನಿಸಿ, ನ್ಯಾಯಾಲಯದಲ್ಲಿ ವಿಚಾರಣೆಗೆ ಪ್ರಕರಣ ಬಂದಾಗ ನೀನು ಮಾತನಾಡಲು ಅವಕಾಶ ಕಲ್ಪಿಸಲು ಸೂಚಿಸಲಾಗುವುದು ಎಂದರು. ಇನ್ನೂ ಕೆಲವು ಕೈದಿಗಳ ಸಮಸ್ಯೆ ಆಲಿಸಿದರು.