

ರಾಘವೇಂದ್ರ ದಾಸರಹಳ್ಳಿ ಕೊರಟಗೆರೆ
ಕಚೇರಿ ಎಂದಾಕ್ಷಣ ಕಾನೂನು, ಕಡತ, ಕರ್ತವ್ಯ ನೆನಪಾಗುತ್ತದೆ. ಆದರೆ ಕೊರಟಗೆರೆಯ ನೂತನ ಬಿಇಒ ಕಚೇರಿಕಡತಗಳ ಬದಲಿಗೆ ತಂಪು, ರ್ನಿಲಿಪ್ತ ಗೋಡೆಯ ಬದಲಿಗೆ ಜ್ಞಾನತತ್ವದ ಬರಹಗಳು, ನಿರ್ಜೀವ ಮೇಜುಗಳ ಬದಲಿಗೆ ಜೀವಂತ ಚೇತನದ ಪರಿಸರ ಎಲ್ಲರನ್ನೂ ಆಕರ್ಷಿಸುತ್ತಿದೆ.
ಹೌದು..! ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ನೂತನ ಕಚೇರಿಯು ನಿರ್ವಹಣೆ ಮತ್ತು ವಿನ್ಯಾಸದ ವಿಶಿಷ್ಟತೆಯಿಂದ ರಾಜ್ಯದ ಶಿಕ್ಷಣ ವಲಯದಲ್ಲಿ ಮಾದರಿಯಾಗಿ ಹೊರಹೊಮ್ಮುತ್ತಿದೆ. ಕಾರ್ಯನಿರ್ವಹಣಾ ಕೇಂದ್ರವಲ್ಲದೇ ವಿದ್ಯೆಯ ಜೀವಂತ ದರ್ಪಣವಾಗಿದ್ದು, ಇದೇ ಏ.14ರಂದು ಅಂಬೇಡ್ಕರ್ ಜಯಂತಿಯ ದಿನ ಉದ್ಘಾಟನೆಗೆ ಸಿದ್ಧಗೊಂಡಿದೆ.
ವಿದ್ಯೆಯ ಹಾಡು ಹಾಡುವ ಗೋಡೆಗಳು!: ಕಚೇರಿಯ ಗೋಡೆಗಳು ಕಲಾತ್ಮಕ ಬರಹಗಳಿಂದ ಮಿಂಚುತ್ತಿವೆ. ಗೌತಮ ಬುದ್ಧ, ಸಾಕ್ರೆಟಿಸ್, ಸ್ವಾಮಿ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್, ಸರ್ವಪಲ್ಲಿ ರಾಧಾಕೃಷ್ಣನ್, ಅಬ್ದುಲ್ ಕಲಾಂ, , ಕುವೆಂಪು, ಶಿವರಾಮ ಕಾರಂತ ಸೇರಿ ಹಲವು ಮಹನೀಯರ, ಸಾಧಕರ ನುಡಿಮುತ್ತುಗಳು ಅದರಲ್ಲೂ ಗುರುವಿನ ಸಾನಿಧ್ಯದಲ್ಲಿ ಬೆಳೆಯುವ ಭವಿಷ್ಯ, ಜ್ಞಾನವೇ ನಿಜವಾದ ಸ್ವಾತಂತ್ರ$್ಯ, ಅಕ್ಷರ ಚಿಂತನೆಯಲ್ಲಿ ಅರ್ಥಪೂರ್ಣ ಜೀವನದ ನುಡಿಮುತ್ತುಗಳು ಸಿಬ್ಬಂದಿ ಮತ್ತು ಕಚೇರಿ ಪ್ರವೇಶಿಸುವ ಪ್ರತಿಯೊಬ್ಬರಿಗೂ ಗೋಚರಿಸಿ, ವಿದ್ಯೆಯ ಮಹತ್ವವನ್ನು ಮನದಟ್ಟು ಮಾಡುತ್ತಿವೆ. ಕರ್ತವ್ಯ ನಿರ್ವಹಿಸಲು ಪ್ರೇರಣೆ ಮತ್ತು ಪ್ರತಿ ದಿನವೂ ಸ್ಫೂರ್ತಿ ನೀಡುತ್ತಿವೆ.
ಪರಿಸರ ಸ್ನೇಹಿ ಕಚೇರಿ: ಕಚೇರಿಯ ಆವರಣದಲ್ಲಿ 100ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳು, ಹನಿ ನೀರಾವರಿ ವ್ಯವಸ್ಥೆ, ಧ್ವಜ ಸ್ತಂಭ, ವಿದ್ಯಾವನ ಮತ್ತು ಕೊಳವೆ ಬಾವಿಯ ಸೌಲಭ್ಯ, ಕಾಪೌಂಡ್ ನಿಮಾರ್ಣ ಮಾಡಿ ಪರಿಸರ ಸ್ನೇಹಿ ಕಚೇರಿ ನಿಮಾರ್ಣದತ್ತ ನಿರ್ಧರಿತ ಹೆಜ್ಜೆ ಇಡಲಾಗಿದೆ. ಇದು ಪಠ್ಯ, ಪಾಠಗಳೊಂದಿಗೆ ಪರಿಸರದ ಜತೆಗೆ ಸೌಹಾರ್ದದ ಕಲಿಕೆಯನ್ನು ಜಾರಿಗೊಳಿಸುತ್ತಿದೆ. ಇಂದಿನ ದಿನಗಳಲ್ಲಿ ಶಾಲೆಗಳಲ್ಲಿ ಕಂಡು ಬರುವ ಸೌಂದರ್ಯ ಹಾಗೂ ಪ್ರೇರಣಾತ್ಮಕ ವಾತಾವರಣ ಕಚೇರಿಗಳಲ್ಲೂ ಬೇಕು ಎಂಬ ಚಿಂತನೆಗೆ ಉತ್ತರವಾಗಿ ಈ ಯೋಜನೆ ಮೂಡಿಬಂದಿದೆ. ವಿದ್ಯಾಭ್ಯಾಸದ ವಾತಾವರಣ ಎಲ್ಲೆಲ್ಲೂ ಇರಲಿಎಂಬ ಅಭಿಪ್ರಾಯದೊಂದಿಗೆ ಈ ಕಚೇರಿ ಇತರ ಶಿಕ್ಷಣ ಕಚೇರಿಗಳಿಗೆ ಮಾದರಿಯಾಗಿ ನಿಂತಿದೆ.