

ಹುಬ್ಬಳ್ಳಿ: ಈಗಾಗಲೇ ಆಸ್ತಿ ತೆರಿಗೆ ದರದಲ್ಲಿ ವಿಪರೀತ ಏರಿಕೆಯಿಂದಾಗಿ ಕಂಗಾಲಾಗಿರುವ ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಜನತೆಗೆ ಹು-ಧಾ ಮಹಾನಗರ ಪಾಲಿಕೆ ಮತ್ತೊಂದು ಶಾಕ್ ನೀಡಿದೆ. ಇನ್ನು ಮುಂದೆ ಕಟ್ಟಡ ನಿರ್ವಣಕ್ಕೆ ಪರವಾನಗಿ ಪಡೆಯುವವರು ಹೆಚ್ಚುವರಿಯಾಗಿ ಭದ್ರತಾ ಠೇವಣಿ ಪಾವತಿಸಬೇಕು.
ಸ್ಥಿರಾಸ್ತಿ ಹೊಂದಿದವರು 2021-22ನೇ ಸಾಲಿನಲ್ಲಿ ಶೇ. 20ರಿಂದ ಶೇ. 100ರಷ್ಟು ಹೆಚ್ಚು ಆಸ್ತಿ ತೆರಿಗೆ ಸಂದಾಯ ಮಾಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಇದಲ್ಲದೆ, ಮನೆ, ಅಪಾರ್ಟಮೆಂಟ್, ವಾಣಿಜ್ಯ ಮಳಿಗೆ ನಿರ್ವಣಕ್ಕೂ ಪೂರ್ವ ಪ್ರತಿ ಚದರ ಮೀಟರ್ಗೆ 150 ರೂಪಾಯಿ ನಂತೆ ಭದ್ರತಾ ಠೇವಣಿ ಸಂದಾಯ ಮಾಡಬೇಕು ಎಂದು ಪಾಲಿಕೆ ಹೇಳುತ್ತಿದೆ. ಅಂದರೆ, 1 ಸಾವಿರ ಚದರ ಅಡಿ (92.93 ಚದರ ಮೀಟರ್) ವಿಸ್ತೀರ್ಣದ ಕಟ್ಟಡಕ್ಕೆ 13940 ರೂ. ನೀಡಬೇಕು.
ಕಟ್ಟಡ ನಿರ್ವಣಕ್ಕೆ ಪರವಾನಗಿ ಪ್ರಮಾಣಪತ್ರ ಪಡೆಯಬೇಕಾದರೆ ಪರವಾನಗಿ ಶುಲ್ಕ, ಲೇಬರ್ ಸೆಸ್, ರಸ್ತೆ ಮತ್ತು ಗಟಾರ ದುರಸ್ತಿ ಶುಲ್ಕ, ಪರಿಶೋಧನೆ, ಕೋರಿಯರ್ ವೆಚ್ಚ, ಬೆಟರಮೆಂಟ್ ಲೇವಿ, ಕಾರ್ಯವಿಧಾನ ಶುಲ್ಕ ಎಲ್ಲವನ್ನೂ ಪಾವತಿಸಬೇಕು. ಇವೆಲ್ಲದರ ಜತೆ ಇದೀಗ ಭದ್ರತಾ ಠೇವಣಿಯ ಹೊರೆ ಬಿದ್ದಿದೆ. ಕರೊನಾ ಸಂಕಷ್ಟದ ಕಾಲದಲ್ಲೂ ನಾಗರಿಕರ ಜೇಬಿಗೆ ಕತ್ತರಿ ಹಾಕುವ ಮಹಾನಗರ ಪಾಲಿಕೆಯ ನಡೆ ಇದೀಗ ಆಕ್ರೋಶಕ್ಕೆ ಗುರಿಯಾಗಿದೆ. ಪಾಲಿಕೆಯಲ್ಲಿ ಕಳೆದ 2 ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತವಿಲ್ಲ. ಅಧಿಕಾರಿಗಳು ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ ಎಂಬುದಕ್ಕೆ ಇದು ಒಂದು ನಿದರ್ಶನ ಎಂದು ಪ್ರಜ್ಞಾವಂತ ನಾಗರಿಕರು ದೂರುತ್ತಿದ್ದಾರೆ.
ವಲಯ ನಿಯಂತ್ರಣ ನಿಯಮ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಹೊಸ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) 2019ರಿಂದ ಅನುಷ್ಠಾನಕ್ಕೆ ಬಂದಿದೆ. ಇದರಲ್ಲಿ ಉಲ್ಲೇಖಿಸಿರುವ ವಲಯ ನಿಯಂತ್ರಣ ನಿಯಮಗಳು (ಝೋನಿಂಗ್ ರೆಗ್ಯುಲೇಶನ್ ರೂಲ್ಸ್) ಪಾಲಿಕೆಗೂ ಅನ್ವಯವಾಗುತ್ತದೆ. ಅದರನ್ವಯ ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿದೆ.
ಪಾಲಿಕೆಯು ಭದ್ರತಾ ಠೇವಣಿಯನ್ನು ಹಣದ ರೂಪದಲ್ಲಿ ಪಡೆಯುವುದಿಲ್ಲ. ಬ್ಯಾಂಕ್ನಿಂದ ಎಫ್ಡಿಆರ್ (ಫಿಕ್ಸಡ್ ಡಿಪಾಸಿಟ್ ರಿಸೀಟ್) ಬಾಂಡ್ ಪಡೆದು ಕಟ್ಟಡ ಪರವಾನಗಿ ಪ್ರಮಾಣಪತ್ರಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಲಗತ್ತಿಸಬೇಕು. ಈ ಎಫ್ಡಿಆರ್ ಬಾಂಡ್ ಪಡೆಯಲು ಅದರ ಮೊತ್ತಕ್ಕೆ ಅನುಗುಣವಾಗಿ ಬ್ಯಾಂಕ್ಗೆ ಶುಲ್ಕ ಬೇರೆ ಪಾವತಿಸಬೇಕು. ಎಫ್ಡಿಆರ್ ಬಾಂಡ್ನ ಮಾನ್ಯತೆ ಅವಧಿ 6 ತಿಂಗಳು ಮಾತ್ರ. ಅಷ್ಟರೊಳಗೆ ಕಟ್ಟಡದ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಬ್ಯಾಂಕ್ಗೆ ಮತ್ತೊಮ್ಮೆ ಶುಲ್ಕ ಪಾವತಿಸಿ ಬಾಂಡ್ ಅನ್ನು ನವೀಕರಿಸಬೇಕು. ಒಟ್ಟಾರೆ ಹಣವೂ ವ್ಯಯವಾಗುವ ಜತೆಗೆ ಬ್ಯಾಂಕ್ ಅಲೆಯುವ ಕಿರಿಕಿರಿಯನ್ನು ಸೃಷ್ಟಿಸಿದೆ.
ಹಣಕ್ಕೆ ಬಡ್ಡಿಯೂ ಇಲ್ಲ ಮುಟ್ಟುಗೋಲಿಗೂ ಅವಕಾಶ
ಪಾಲಿಕೆಯು ಭದ್ರತಾ ಠೇವಣಿ ಮೊತ್ತವನ್ನು ಬಡ್ಡಿ ರಹಿತವಾಗಿ ವಾಪಸ್ ನೀಡಲಿದೆ. ಆದರೆ, ಇದಕ್ಕೆ ಹಲವು ಷರತ್ತುಗಳಿವೆ. 2 ವರ್ಷದೊಳಗೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕು. ಅನುಮತಿಸಿದ ಪರವಾನಗಿ ಪ್ರಮಾಣಪತ್ರಕ್ಕೆ ನಿರ್ವಣವು ವ್ಯತಿರಿಕ್ತವಾಗಿದ್ದಲ್ಲಿ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ಜರುಗಿಸಲಿದೆ. ನಿರ್ವಣದ ಸುತ್ತಮುತ್ತಲಿನ ಸ್ಥಳದಲ್ಲಿ ಕಟ್ಟಡದ ಅವಶೇಷಗಳನ್ನು ಎಸೆದಿದ್ದಲ್ಲಿ ಅವುಗಳನ್ನು ಪಾಲಿಕೆಯು ತೆರವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಭದ್ರತಾ ಠೇವಣಿ ಮೊತ್ತದಲ್ಲಿ ಕಡಿತ ಮಾಡಲಿದೆ. ಕಟ್ಟಡದ ಅನುಭೋಗ ಪ್ರಮಾಣ ಪತ್ರ ಪಡೆದ 30 ದಿನಗಳೊಳಗೆ ಭದ್ರತಾ ಠೇವಣಿ ಹಿಂದಿರುಗಿಸಲಿದೆ.
ಏಪ್ರಿಲ್ನಲ್ಲಿ ಯಾರೊಬ್ಬರಿಗೂ ದೊರೆತಿಲ್ಲ ಪರವಾನಗಿ!
ಪಾಲಿಕೆಯಿಂದ ಲೈಸೆನ್ಸ್ ಪಡೆದ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಗಳ ಮೂಲಕ ಕಟ್ಟಡ ನಿರ್ಮಾಣ ಪರವಾನಗಿಗಾಗಿ ಜನರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಇದೀಗ ಭದ್ರತಾ ಠೇವಣಿಯಿಂದ ಎದುರಾಗಿರುವ ತಾಂತ್ರಿಕ ಸಮಸ್ಯೆಯಿಂದ ಏಪ್ರಿಲ್ ತಿಂಗಳಲ್ಲಿ ಇಲ್ಲಿಯವರೆಗೂ ಪಾಲಿಕೆ ಹು-ಧಾ ಅವಳಿ ನಗರದಲ್ಲಿ ಯಾರಿಗೂ ಕಟ್ಟಡ ನಿರ್ವಣಕ್ಕೆ ಪರವಾನಗಿ ನೀಡಿಲ್ಲ. ಕಂಪ್ಯೂಟರ್ ತಂತ್ರಾಂಶದಲ್ಲಿ ಭದ್ರತಾ ಠೇವಣಿಗೆ ಸಂಬಂಧಿಸಿದಂತೆ ಚಲನ್ ಸೃಷ್ಟಿಸಬೇಕಿದೆ.
ಕಟ್ಟಡ ನಿರ್ವಣಕ್ಕೆ ಪರವಾನಗಿಗಾಗಿ
ಪಡೆಯುವ ಭದ್ರತಾ ಠೇವಣಿ ಮೊತ್ತವನ್ನು ಮರುಪಾವತಿಸಲಾಗುವುದು ಎಂದು ಪಾಲಿಕೆ ಹೇಳುತ್ತದೆ. ಆದರೆ, ನಿರ್ವಣದ ವೇಳೆ ಸಾರ್ವಜನಿಕ ರಸ್ತೆ, ಗಟಾರ್, ಯುಜಿಡಿ ಮಾರ್ಗಕ್ಕೆ ಹಾನಿಯಾದರೆ ಭದ್ರತಾ ಠೇವಣಿಯಲ್ಲಿ ಕಡಿತ ಮಾಡಲಾಗುವುದು ಎಂದೂ ಹೇಳಿದೆ. ಈಗಾಗಲೇ ರಸ್ತೆ, ಗಟಾರ ದುರಸ್ತಿಗಾಗಿ ಪ್ರತಿ ರನ್ನಿಂಗ್ ಮೀಟರ್ಗೆ ಮೂರು ಸಾವಿರ ರೂಪಾಯಿ ಪಡೆಯಲಾಗುತ್ತಿದೆ. ಇದೀಗ ಹೆಚ್ಚುವರಿಯಾಗಿ ಭದ್ರತಾ ಠೇವಣಿ ಪಡೆಯುವುದು ಸರಿಯಲ್ಲ.|ಪ್ರಶಾಂತ ಲೋಕಾಪುರಅಧ್ಯಕ್ಷ, ಹು-ಧಾ ಡಿಪ್ಲೊಮಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್
ಕಟ್ಟಡ ನಿರ್ವಣಕ್ಕೆ ಪರವಾನಗಿ ಪಡೆಯುವ ಜನರ ಮೇಲೆ ಭದ್ರತಾ ಠೇವಣಿ ಆಕರಣೆಗೆ ಮುಂದಾಗಿರುವ ಪಾಲಿಕೆ ಕ್ರಮವನ್ನು ಬಲವಾಗಿ ವಿರೋಧಿಸುತ್ತೇವೆ. ಕರೊನಾದಿಂದ ಜನರು ಸಂಕಷ್ಟದಲ್ಲಿರುವಾಗ ಪಾಲಿಕೆ ಈ ರೀತಿ ಒಂದರ ಮೇಲೊಂದು ತೆರಿಗೆ ಹೇರುತ್ತಿರುವುದು ಸರಿಯಲ್ಲ. ಪಾಲಿಕೆ ಆಯುಕ್ತರು ತಕ್ಷಣದಿಂದಲೇ ಭದ್ರತಾ ಠೇವಣಿ ಆಕರಣೆಯನ್ನು ರದ್ದುಪಡಿಸಬೇಕು.| ಸುರೇಶ ಕಿರೇಸೂರಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ), ಹುಬ್ಬಳ್ಳಿ ಸೆಂಟರ್
ವಲಯ ನಿಯಂತ್ರಣ ನಿಯಮಗಳ ಪ್ರಕಾರ ಈ ವರ್ಷದಿಂದ ಭದ್ರತಾ ಠೇವಣಿ ಪಡೆಯಲಾಗುತ್ತಿದೆ. ಇದಕ್ಕಾಗಿ ಲೋಕಲ್ ಸಾಫ್ಟವೇರ್ನಲ್ಲಿ ಚಲನ್ ಸೃಷ್ಟಿಸಬೇಕಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಂದ ಒಪ್ಪಿಗೆ ಪಡೆಯಲಾಗಿದೆ. ಈ ಕಾರಣಕ್ಕಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಏಪ್ರಿಲ್ ತಿಂಗಳಲ್ಲಿ ಕಟ್ಟಡ ನಿರ್ವಣಕ್ಕೆ ಪರವಾನಗಿ ನೀಡಲು ಸಾಧ್ಯವಾಗಿಲ್ಲ. ಮಾರ್ಚ್ವರೆಗಿನ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಪರವಾನಗಿ ನೀಡಲಾಗಿದೆ.| ವಾಣಿಶ್ರೀ ಹಂಪಿಕರಉಪ ನಿರ್ದೇಶಕರು ನಗರ ಯೋಜನೆ, ಪಾಲಿಕೆ