ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮುಖ್ಯ

Published on

ಬಳ್ಳಾರಿ : ಮಕ್ಕಳು ತಮ್ಮ ಜೀವನದಲ್ಲಿ ಉತ್ತಮ ಪ್ರಜೆಯಾಗಲು ಹಾಗೂ ಉನ್ನತ ಸ್ಥಾನಕ್ಕೆರಲು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಹೇಳಿದರು.
ನಗರದ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಕ್ಕಳ ಕಲ್ಯಾಣ ಘಟಕ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಸಹಯೋಗದೊಂದಿಗೆ ಶನಿವಾರ ನಡೆದ ಸರ್ಕಾರಿ ಪಾಲನಾ ಸಂಸ್ಥೆಯ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಆರೋಗ್ಯ ಇಲಾಖೆ ವತಿಯಿಂದ ಪ್ರತಿ ತಿಂಗಳು ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಿದ್ದು, ಇದರ ಸದುಪಯೋಗ ಪಡೆಯುವುದರ ಮೂಲಕ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಂಡು ತಮ್ಮ ಜೀವನವನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಕೆ. ಜಿ. ವೀರೇಂದ್ರ ಕುಮಾರ್ ಮಾತಾನಾಡಿ, ಸಾಮಾನ್ಯವಾಗಿ 15-25 ವರ್ಷ ವಯಸ್ಸಿನ ಅವಧಿಯಲ್ಲಿ ಬರಬಹುದಾದ ಮಾನಸಿಕ ಖಾಯಿಲೆಯು ವ್ಯಕ್ತಿಯ ಮನಸ್ಸಿನ ಕ್ರಿಯೆಗಳಲ್ಲಿ ಆಲೋಚನೆ, ಭಾವನೆಗಳು ಹಾಗೂ ಪಂಚೇಂದ್ರಿಯಗಳ ಮೂಲಕ ತನ್ನ ಸುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳಲಾಗದ ಸ್ಥಿತಿಗೆ ಒಳಗಾಗುತ್ತಾನೆ. ಇದಕ್ಕೆ ಸೂಕ್ತ ಔಷಧೋಪಚಾರವಿದ್ದು, ಹತೋಟಿಗೆ ತರಬಹುದು ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ತಜ್ಞ ಡಾ.ರೋಹನ್ ವನಗುಂದಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net