

ಹಾಸನ: ಇತ್ತೀಚಿನ ದಿನಮಾನಗಳಲ್ಲಿ ಆಗಿರುವ ಮಹತ್ತರ ಬದಲಾವಣೆಗಳಿಗೆ ವಿಜ್ಞಾನದಲ್ಲಿ ಆಗಿರುವ ಹೊಸ ಹೊಸ ಅವಿಷ್ಕಾರಗಳೇ ಕಾರಣ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ್ ಹಾರನಹಳ್ಳಿ ತಿಳಿಸಿದರು.
ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜು ಹಾಗೂ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ, ಕಾಲೇಜಿನ ರಜತ ಮಹೋತ್ಸವ ನೆನಪಿನ 30ನೇ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವಿಚಾರ ವಿದ್ಯಾರ್ಥಿಗಳಿಗೆ ಬೆರಳ ತುದಿಯಲ್ಲೇ ಸಿಗಲಿದೆ. ಅದರ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.
ಇಸ್ರೋ ಮಾನಿಟರ್ ಸಂಸ್ಥೆ ಎಂಸಿಎಫ್ ಹಾಸನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಅನೇಕ ಸಮಸ್ಯೆ ನಡುವೆಯೂ ಸ್ಪೇಸ್ ರಿಸರ್ಚ್ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿದೆ. ಆ ಸ್ಯಾಟಲೈಟ್ ಉಪಗ್ರಹದ ಮೂಲಕ ನಮಗೆ ಸಿಗುವ ಪ್ರತಿ ಮಾಹಿತಿಯೂ ಉಪಯುಕ್ತವಾಗಿದೆ. ತಾಂತ್ರಿಕ ಕ್ಷೇತ್ರದಲ್ಲಿ ಒಂದು ಅದ್ಭುತವಾದ ಬದಲಾವಣೆ ಮಾಡಿದೆ. ನಮ್ಮ ವಿದ್ಯಾರ್ಥಿಗಳೂ ಕೂಡ ಇಸ್ರೋ ಸಂಸ್ಥೆಯ ಅನೇಕ ಚಟುವಟಿಕೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ವಿಜ್ಞಾನ ಕ್ಷೇತ್ರದಲ್ಲಿ ಅನೇಕ ಅವಕಾಶ ಇವೆ. ವಿಜ್ಞಾನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದನ್ನೂ ಮಾಡಬಹುದು. ಆದರೆ ಯಾವ ರೀತಿ ಬಳಕೆ ಮಾಡುತ್ತೇವೆ ಎಂಬುದರ ಮೇಲೆ ನಿರ್ಧಾರ ಆಗಲಿದೆ. ಈಗಾಗಲೇ ಚಂದ್ರಯಾನ ಮಾಡಿರುವ ಇಸ್ರೋ ಇದೀಗ ಆದಿತ್ಯಯಾನ ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಯಾವುದೇ ವಿಷಯವಾಗಲಿ ಅದರ ಬಗ್ಗೆ ಆಳವಾಗಿ ಅರ್ಥ ಮಾಡಿಕೊಂಡರೆ ಮಾತ್ರ ಪ್ರಶ್ನೆ ಮಾಡಲು ಸಾಧ್ಯ. ವಿಜ್ಞಾನ ಕ್ಷೇತ್ರದಲ್ಲಿ ಭಾರತ, ಅದ್ವಿತೀಯ ಸಾಧನೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಎಲ್ಲವನ್ನೂ ಅರಿತು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ದತ್ತಿ ಉಪನ್ಯಾಸದಲ್ಲಿ ಇಸ್ರೋ ಬೆಂಗಳೂರಿನ ಕಂಟ್ರೋಲ್ ಸಿಸ್ಟಂ ಗ್ರೂಪ್ ವಿಭಾಗದ ಮುಖ್ಯಸ್ಥ ಸುಮಾ ಹಿರೇಮಠ ಅವರು ಪ್ರೊಜೆಕ್ಟರ್ ಮೂಲಕ ಕೆಲ ಪ್ರಮುಖ ವಿಚಾರ ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ಅನೇಕ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಪುಸ್ತಕ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಕೋಶಾಧ್ಯಕ್ಷ ಎಸ್.ಜಿ. ಶ್ರೀಧರ್, ಜಂಟಿ ಕಾರ್ಯದರ್ಶಿ ಡಾ. ಡಿ.ಸಿ. ಅರವಿಂದ, ಆಡಳಿತ ಕಚೇರಿ ವ್ಯವಸ್ಥಾಪಕ ಶಿವರಾಮಕೃಷ್ಣಯ್ಯ, ಎವಿಕೆ ಕಾಲೇಜು ಪ್ರಾಂಶುಪಾಲ ಡಾ. ಸೀ.ಚ. ಯತೀಶ್ವರ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಎಸ್. ಚಂದ್ರಶೇಖರ್, ನಿರ್ದೇಶಕ ಚೌಡಹಳ್ಳಿ ಜಗದೀಶ್ ಇತತರು ಇದ್ದರು.