ಇತಿಹಾಸ ಸೃಷ್ಟಿಸಿದ ಅಂಬೇಡ್ಕರ್​ ಜಯಂತಿ : ನೂರಕ್ಕೂ ಹೆಚ್ಚು ಸ್ತಬ್ಧ ಚಿತ್ರ, ಪಲ್ಲಕ್ಕಿ ಮೆರವಣಿಗೆ, ಕ್ಲಾಕ್​ ಟವರ್​ನಲ್ಲಿ ಮುಸ್ಲಿಮರಿಂದ ಹೂಮಳೆ, ಸಂಸದ ಮುನಿಸ್ವಾಮಿ ಭಾಗಿ

2
Published on

ಕೋಲಾರ: ಡಾ.ಬಿ.ಆರ್​.ಅಂಬೇಡ್ಕರ್​ ಭಾವಚಿತ್ರದ ನೂರಕ್ಕೂ ಹೆಚ್ಚು ಬೆಳ್ಳಿರಥ, ಪಲ್ಲಕ್ಕಿ, ಸ್ತಬ್ಧಚಿತ್ರಗಳ ಅದ್ದೂರಿ ಮೆರವಣಿಗೆ, ಗಡಿಯಾರ ಗೋಪುರದ ಮೂಲಕ ಹಾದು ಹೋದ ಮೆರವಣಿಗೆ ಮುಸ್ಲಿಂರಿಂದ ಹೂವು ಚೆಲ್ಲಿ ಸ್ವಾಗತ, ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಸಂಸದ ಮುನಿಸ್ವಾಮಿ ತಮಟೆ ಭಾರಿಸಿ, ಸ್ಟೆಪ್​ ಹಾಕಿದ್ದು, ಕೆಲವು ಮುಸ್ಲಿಂ, ಕಾಂಗ್ರೆಸ್​ ಮತ್ತು ದಲಿತ ಮುಖಂಡರಿಂದ ಎರಡ್ಮೂರು ಪಲ್ಲಕ್ಕಿಗಳೊಂದಿಗೆ ಪ್ರತ್ಯೇಕ ಮೆರವಣಿಗೆ... ಇವಿಷ್ಟು ನಗರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಮತ್ತಿತರ ಸಂಘಟನೆಗಳು ಆಯೋಜಿಸಿದ್ದ ಅಂಬೇಡ್ಕರ್​ ಜಯಂತಿ ವೇಳೆ ಕಂಡುಬಂದ ದೃಶ್ಯಗಳು.

ನಗರದ ಬಂಗಾರಪೇಟೆ ವೃತ್ತದ ಡಾ.ಅಂಬೇಡ್ಕರ್​ ಪುತ್ಥಳಿಗೆ ಜಿಲ್ಲಾಧಿಕಾರಿ ವೆಂಕಟ್​ ರಾಜಾ ಮಾಲಾರ್ಪಣೆ ಮಾಡುವ ಮೂಲಕ ಜಯಂತಿಗೆ ಚಾಲನೆ ನೀಡಿದರು. ನಂತರ ಅಂಬೇಡ್ಕರ್​ ಭಾವಚಿತ್ರ ಹೊತ್ತ ಬೆಳ್ಳಿರಥ, ಸ್ತಬ್ಧ ಚಿತ್ರ, ಪಲ್ಲಕ್ಕಿಗಳು ಡೂಂ ಲೈಟ್​ ವೃತ್ತದ ಮೂಲಕ ಕ್ಲಾಕ್​ ಟವರ್​ ಕಡೆ ಸಾಗಿದವು. ಮುಂಚೂಣಿಯಲ್ಲಿ ಗಾರುಡಿಗೊಂಬೆ, ಮರಗಾಲು, ತಮಟೆ ವಾದಕರು ಸೇರಿ ವಿವಿಧ ಜಾನಪದ ಕಲಾ ತಂಡಗಳು ಪ್ರದರ್ಶನ ನೀಡುತ್ತಾ ಸಾಗಿದರೆ, ನಗರದ ವಿವಿಧ ವಾರ್ಡ್​, ಹಳ್ಳಿಗಳು, ಸಂಘಟನೆಗಳು, ಇಲಾಖೆಗಳು ಟ್ರಾ$್ಯಕ್ಟರ್​, ಟೆಂಪೋಗಳಲ್ಲಿ ತಂದಿದ್ದ ನೂರಕ್ಕೂ ಹೆಚ್ಚು ಬೆಳ್ಳಿರಥ, ಸ್ತಬ್ಧ ಚಿತ್ರ, ಪಲ್ಲಕ್ಕಿಗಳು ಹಿಂಬಾಲಿಸಿದವು. ಎಸ್ಪಿ ಡಿ.ದೇವರಾಜ್​ ನೇತೃತ್ವದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು.

ಡಿಜೆಗೆ ಸ್ಟೆಪ್ಸ್​ ಹಾಕಿದ ಸಂಸದ ಮುನಿಸ್ವಾಮಿ: ವಿಶೇಷವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಡಾ.ಅಂಬೇಡ್ಕರ್​ ಭಾವಚಿತ್ರದ ಬಳಿ ನಿಂತಿದ್ದ ಸಂಸದ ಎಸ್​.ಮುನಿಸ್ವಾಮಿ ಜನರತ್ತ ಕೈಬೀಸುತ್ತಾ ಸಾಗಿದರು. ಯುವಕರೊಂದಿಗೆ ಬಾಬಾ ಸಾಹೇಬ್​ಗೆ ಜೈಕಾರ ಹಾಕಿದರು. ಮಾರ್ಗ ಮಧ್ಯೆ ಕೆಳಕ್ಕಿಳಿದು ಕಲಾವಿದರೊಬ್ಬರಿಂದ ತಮಟೆ ಪಡೆದು ಬಾರಿಸಿದ ಮುನಿಸ್ವಾಮಿ ಡಿಜೆ ಹಾಡಿಗೆ ಅಭಿಮಾನಿಗಳೊಂದಿಗೆ ಸ್ಟೆಪ್​ ಹಾಕಿದರು. ಕ್ಲಾಕ್​ ಟವರ್​ನಲ್ಲಿ ಮುಸ್ಲಿಮರು ಅಂಗಡಿ ಮಳಿಗೆ ಮೇಲಿಂದ ಮೆರವಣಿಗೆ ಮೇಲೆ ಹೂಮಳೆಗರೆದರು. ಡಿಜೆ ಹಾಡಿಗೆ ಮುಸ್ಲಿಂ ಯುವಕರೂ ಸ್ಟೆಪ್ಸ್​ ಹಾಕಿದ್ದು ವಿಶೇಷವಾಗಿತ್ತು. ಅಲ್ಲಿಂದ ಮೆರವಣಿಗೆ ಬಸ್​ ನಿಲ್ದಾಣ ವೃತ್ತ, ಎಂಬಿ ರಸ್ತೆ, ಮೆಕ್ಕೆ ವೃತ್ತ ಮೂಲಕ ರಂಗಮಂದಿರ ಬಳಿ ಬಂದು ಮುಕ್ತಾಯಗೊಂಡಿತು.

ಪ್ರತ್ಯೇಕ ಮೆರವಣಿಗೆ: ಮುಖಂಡ ಪಂಡಿತ್​ ಮುನಿವೆಂಕಟಪ್ಪ ಮತ್ತಿತರರು ಕ್ಲಾಕ್​ ಟವರ್​ ಮೂಲಕ ಸಾಗಿದ ಮೆರವಣಿಗೆಯಲ್ಲಿ ಪಾಲ್ಗೊಳ್ಳದೆ ಎಸ್ಸೆನ್ನಾರ್​ ಬಳಿಯಿಂದ ಎಂಜಿ ರಸ್ತೆ ಮೂಲಕ ಪ್ರತ್ಯೇಕ ಮೆರವಣಿಗೆ ನಡೆಸಿದರು. ಶತಶೃಂಗ ಸಂಕೀರ್ಣದ ಎದುರಿನ ಅಂಜುಮಾನ್​ ಕಟ್ಟಡದ ಬಳಿ ಎರಡ್ಮೂರು ಸ್ತಬ್ಧಚಿತ್ರಗಳಿಗೆ ಕಾಂಗ್ರೆಸ್​ ಎಂಎಲ್ಸಿ ನಸೀರ್​ ಅಹ್ಮದ್​, ಅನಿಲ್​ಕುಮಾರ್​ ಇತರರು ಚಾಲನೆ ನೀಡಿದರು. ಮುಖಂಡ ನಾಗನಾಳ ಮುನಿಯಪ್ಪ ಇತರರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮಾನ್​ ಅಧ್ಯಕ್ಷ ಜಮೀರ್​ ಅಹ್ಮದ್​, ಸಂಸದ ಮುನಿಸ್ವಾಮಿ ಒಡೆದು ಆಳುವ ನೀತಿ ಬಿಡಬೇಕು. ಕ್ಲಾಕ್​ ಟವರ್​ಗೆ ಮೆರವಣಿಗೆ ಬಂದಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ ಎಂಬುದನ್ನು ಅವರು ಅರಿಯಲಿ. ಅಭಿವೃದ್ಧಿಗೆ ಗಮನಹರಿಸಲಿ ಎಂದು ಸಲಹೆ ನೀಡಿದರು.

ಸಂಸದರ ಮೇಲೆ ಹೂವು ಚೆಲ್ಲಲಿಲ್ಲ: ಕ್ಲಾಕ್​ ಟವರ್​ ಬಳಿ ಮುಸ್ಲಿಮರು ಸಂಸದ ಮುನಿಸ್ವಾಮಿ ಅವರಿದ್ದ ಪಲ್ಲಕ್ಕಿ ಹೊರತುಪಡಿಸಿ ಉಳಿದೆಲ್ಲ ವಾಹನಕ್ಕೆ ಹೂವು ಚೆಲ್ಲಿದರು. ಸಂಸದರ ವಾಹನ ಬರುತ್ತಿದ್ದಂತೆ ಮುಸ್ಲಿಂ ಮುಖಂಡರು ನಕ್ಕೋರೆ, ಎಂಪಿ ಆತಿ ಚೋಡೊ ಚೋಡೊ ಎಂದು ಕೂಗಿದರು. ಟವರ್​ ಬಳಿಯ ವೇದಿಕೆಯಲ್ಲಿ ಶಾಸಕರಾದ ರಮೇಶ್​ ಕುಮಾರ್​, ಕೆ.ಶ್ರೀನಿವಾಸಗೌಡ, ಎಂಎಲ್ಸಿಗಳಾದ ಅನಿಲ್​ ಕುಮಾರ್​, ನಜೀರ್​ ಅಹಮದ್​ ಇದ್ದರೂ ಸಹ ಸಂಸದರನ್ನು ಮಾತನಾಡಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net