ಇತಿಹಾಸ ಮರುಕಳಿಸಿದ ಪುಟ್ಟಸ್ವಾಮಿಗೌಡರ ಮೊಮ್ಮಗ!

ಇತಿಹಾಸ ಮರುಕಳಿಸಿದ ಪುಟ್ಟಸ್ವಾಮಿಗೌಡರ ಮೊಮ್ಮಗ!
Published on

ಹಾನಸ: ಅದು 1999ರ ಲೋಕಸಭಾ ಚುನಾವಣೆಯ ಹಣಾಹಣಿಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸೋಲರಿಯದ ಮಾಜಿ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡ ಅವರನ್ನು ಅವರ ತವರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಿ. ಪುಟ್ಟಸ್ವಾಮಿಗೌಡ ಅವರು ಸೋಲಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದರು. ಇದೀಗ ಎರಡು ದಶಕಗಳ ನಂತರ ಅದೇ ದೇವೇಗೌಡರ ಮೊಮ್ಮಗನನ್ನು ಪುಟ್ಟಸ್ವಾಮಿಗೌಡರ ಮೊಮ್ಮಗ ಸೋಲಿಸುವ ಮೂಲಕ ತಾತ ನಿರ್ಮಿಸಿದ್ದ ಇತಿಹಾಸವನ್ನು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮರುಕಳಿಸುವ ಮೂಲಕ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿದ್ದಾರೆ.
1999ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಿ. ಪುಟ್ಟಸ್ವಾಮಿಗೌಡ ಅವರು 3,98,344 ಮತಗಳನ್ನು ಪಡೆದರೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಎಚ್.ಡಿ. ದೇವೇಗೌಡ ಅವರು 2,56,518 ಮತಗಳನ್ನು ಪಡೆದು ಬರೋಬ್ಬರಿ 1,41,757 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇದಾದ ಬಳಿಕ 2004ರ ಚುನಾವಣೆಯಲ್ಲಿ ಮತ್ತೆ ಪುಟ್ಟಿದೆದ್ದ ದೇವೇಗೌಡರು ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಜಯಶಾಲಿಯಾದರು. 2019ರ ಚುನಾವಣೆಯಲ್ಲಿ ಕುಟುಂಬದ ಒತ್ತಾಯಕ್ಕೆ ಮಣಿದು ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಧಾರೆ ಎರೆದು ತುಮಕೂರಿನಿಂದ ಸ್ಪರ್ಧೆ ಮಾಡಿ ಸೋಲು ಕಂಡರು. ಆದರೆ, ತಾತನ ಕ್ಷೇತ್ರ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪ್ರಚಂಡ ಗೆಲುವಿನ ನಗೆ ಬೀರಿ ಪ್ರಥಮ ಬಾರಿಗೆ ಸಂಸತ್ ಭವನದ ಮೆಟ್ಟಿಲೇರಿದರು.
2024ರ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಜತೆಗೆ ಸಖ್ಯ ಬೆಳೆಸಿದ ಜೆಡಿಎಸ್ ಹಾಸನ ಕ್ಷೇತ್ರವನ್ನು ತನ್ನ ಪಾಲಿಗೆ ಉಳಿಸಿಕೊಳ್ಳುವಲ್ಲಿ ಜೆೆಡಿಎಸ್ ಮಾಡಿದ ಪ್ರಯತ್ನ ಸಫಲವಾಯಿತು. ಆದರೆ, ಇದರ ನಡುವೆ ನಡೆದ ಹಲವು ಬೆಳವಣಿಗೆಗಳಿಂದ ಜೆಡಿಎಸ್ ಇಂದು ಎಡವಿಬಿದ್ದು ಮೀಸೆ ಮಣ್ಣು ಕೊಂಡಿದೆ. ಅಂದು ದೇವೇಗೌಡರನ್ನು ಸೋಲಿಸಿದ ಅದೇ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಇಂದು ದೇವೇಗೌಡರ ಮೊಮ್ಮಗನ ವಿರುದ್ಧ ಪ್ರಚಂಡ ಗೆಲುವಿನ ನಗೆ ಬೀರಿ ಮೊದಲ ಬಾರಿಗೆ ಸಿಂಹಾಸನದ ಅಧಿಪತಿಯಾಗಿರುವುದಷ್ಟೇ ಅಲ್ಲದೇ ಮರಳಿ ಕಾಂಗ್ರೆಸ್ ತೆಕ್ಕೆಗೆ ಹಾಸನ ಕ್ಷೇತ್ರವನ್ನು ಕೈ ವಶಮಾಡಿಸಿಕೊಟ್ಟಿದ್ದಾರೆ.
ಈ ಚುನಾವಣೆಯನ್ನು ‘ಮೊಮ್ಮಕ್ಕಳ ಕಾಳಗ’ ಎಂದೇ ಹೇಳಲಾಗಿತ್ತು. ಅಲ್ಲದೆ ಇಡೀ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಹಾಸನ ಲೋಕಸಭಾ ಚುನಾವಣೆ ಫಲಿತಾಂಶ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದಕ್ಕೆ ಪ್ರಮುಖ ಕಾರಣ ಅಶ್ಲೀಲ ವಿಡಿಯೋ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪ್ರಜ್ವಲ್ ರೇವಣ್ಣ ಭವಿಷ್ಯ ಈ ಚುನಾವಣೆಯ ಮೇಲೆ ನಿಂತಿತ್ತು. ಇಡೀ ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಹಾಸನ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಶ್ರೇಯಸ್ ಪಟೇಲ್ ಅವರು ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು ಮತ್ತು ಮುಖಂಡರು ಸಂಭ್ರಮಿಸಿ ಸಿಹಿ ಹಂಚಿ ಖುಷಿಪಟ್ಟರು.
ಜಿ. ಪುಟ್ಟಸ್ವಾಮಿಗೌಡರ ಮತ್ತು ದೇವೇಗೌಡರ ಕುಟುಂಬ ಬದ್ಧ ವೈರಿಗಳಂತೆ ಚುನಾವಣೆಯಲ್ಲಿ ಸೆಣೆಸಾಡುತ್ತಿದ್ದರು. ಆದರೆ ಜಿ ಪುಟ್ಟಸ್ವಾಮಿಗೌಡರು ದೇವೇಗೌಡರನ್ನ ಸೋಲಿಸಿದ ನಂತರ ಮತ್ತೆ ಯಾವ ಚುನಾವಣೆಯಲ್ಲಿ ಕೂಡ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಕಳೆದು ಮೂರು ವಿಧಾನಸಭಾ ಚುನಾವಣೆಗಳಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಿದ್ದ ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಅವರು ಸೋತಿದ್ದರು. ಅದಷ್ಟೇ ಅಲ್ಲದೇ, ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅನುಪಮಾ ಅವರ ಮಗ ಶ್ರೇಯಸ್ ಪಟೇಲ್ ಎಚ್.ಡಿ. ರೇವಣ್ಣ ಅವರಿಗೆ ಸೈ ಎನಿಸಿ ಸ್ಪರ್ಧೆ ಮಾಡಿದ್ದರು. ಆದರೆ, ಆ ಚುನಾವಣೆಯಲ್ಲೂ ಶ್ರೇಯಸ್ ಎಚ್.ಡಿ. ರೇವಣ್ಣ ವಿರುದ್ಧ ಕೇವಲ 3 ಸಾವಿರ ಮತಗಳ ಅಂತರದಿಂದ ಸೋತು ನಿರಾಸೆ ಅನುಭವಿಸಿದ್ದರು. ಇದಾದ ನಂತರ ಕಾಂಗ್ರೆಸ್ ಪಕ್ಷ ಈ ಬಾರಿ ಶತಾಯಗತಾಯ ದೇವೇಗೌಡರ ಕುಟುಂಬವನ್ನು ಸೋಲಿಸಲು ಲೋಕಸಭಾ ಕದನಕ್ಕೆ ಶ್ರೇಯಸ್ ಪಟೇಲ್ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸುವ ಮೂಲಕ ದೇವೇಗೌಡರ ಕುಟುಂಬಕ್ಕೆ ಆಘಾತವನ್ನು ನೀಡಿದೆ.

ಜೆಡಿಎಸ್ ಶಾಸಕರ ಕ್ಷೇತ್ರದಲ್ಲೇ ಮುಖಭಂಗ
ಜೆಡಿಎಸ್-ಬಿಜೆಪಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಶ್ರೇಯಸ್ ಪಟೇಲ್ ಅವರು ಜೆಡಿಎಸ್ ಶಾಸಕರು ಇರುವ ಕ್ಷೇತ್ರದಲ್ಲಿಯೇ ಮಣ್ಣುಮುಕ್ಕಿಸಿದ್ದಾರೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ವರು ಜೆಡಿಎಸ್ ಶಾಸಕರಿದ್ದಾರೆ. ಈ ಕ್ಷೇತ್ರಗಳಲ್ಲೇ ಶ್ರೇಯಸ್ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ದಳಪತಿಗಳಿಗೆ ಶಾಕ್ ನೀಡಿದ್ದಾರೆ. ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ಅವರ ಸ್ವಕ್ಷೇತ್ರ ಹೊಳೆನರಸೀಪುರದಲ್ಲಿ 17607 ಮತಗಳ ಅಂತರ ಹಾಗೂ ಹಾಸನದಲ್ಲಿ 19,760, ಅರಕಲಗೂಡಿನಲ್ಲಿ 14,428 ಶ್ರವಣಬೆಳಗೊಳದಲ್ಲಿ 5393 ಮತಗಳು ಜೆಡಿಎಸ್‌ಗಿಂತ ಕಾಂಗ್ರೆಸ್ಸಿಗೆ ಹೆಚ್ಚಿಗೆ ಹೋಗಿರುವುದು ಕಾಂಗ್ರೆಸ್ ಗೆಲುವಿಗೆ ಕಾರಣವಾಗಿವೆ. ಜೆಡಿಎಸ್ ಶಾಸಕರ ಸ್ವಕ್ಷೇತ್ರದಲ್ಲಿ ಲೀಡ್ ಕೊಡಿಸಲು ಸಾಧ್ಯವಾಗದೇ ಇರುವುದರಿಂದ ಜೆಡಿಎಸ್ ಶಾಸಕರಿಗೆ ಭಾರಿ ಹಿನ್ನಡೆ ಉಂಟಾಗಿದೆ. ಇದರ ಜತೆಗೆ ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಇನ್ನುಳಿದಂತೆ ಕಡೂರಿನಲ್ಲಿ 2243, ಬೇಲೂರಿನಲ್ಲಿ 1632 ಸಕಲೇಶಪುರದಲ್ಲಿ 7,346 ಮತಗಳ ಜೆಡಿಎಸ್‌ಗೆ ಲೀಡ್ ನೀಡಿವೆ.

ಎಚ್.ಡಿ. ರೇವಣ್ಣ ಕುಟುಂಬದ ರಾಜಕೀಯ ಭವಿಷ್ಯ ಅಂತ್ಯ?
ಈ ಚುನಾವಣೆಯ ಫಲಿತಾಂಶ ಬಹುತೇಕ ರಾಜಕೀಯ ವಿಶ್ಲೇಷಕರ ನಿರೀಕ್ಷೇಯೇ ಆಗಿತ್ತು. ಏಕೆಂದರೆ, 2023ರ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಡಿ. ರೇವಣ್ಣ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶ್ರೇಯಸ್ ಪಟೇಲ್ ಗೆಲುವಿನ ಸನಿಹಕ್ಕೆ ಹೋಗಿ ಅತ್ಯಲ್ಪ ಮತಗಳಿಂದ ಸೋತಿದ್ದರು. ಈ ಚುನಾವಣೆಯ ಫಲಿತಾಂಶ ಶ್ರೇಯಸ್ ಪಟೇಲ್‌ಗೆ ಇದ್ದ ಅನುಕಂಪದ ಜತೆಗೆ ಎಚ್.ಡಿ. ರೇವಣ್ಣ ಕುಟುಂಬದ ವಿರುದ್ಧ ಜನರಿದ್ದ ಅಸಹನೆಯನ್ನು ವ್ಯಕ್ತಪಡಿಸಿತ್ತು. ಇದೀಗ ಲೋಕಸಭೆ ಚುನಾವಣೆಯಲ್ಲಿ ಸೋತು, ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒಳಗಾಗಿದ್ದರೆ, ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಜೈಲಿಗೆ ಹೋಗಿ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನು ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರು ಬಂಧನದ ಭೀತಿಯಲ್ಲಿ ತಲೆಮರಿಸಿಕೊಂಡಿದ್ದಾರೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಎಚ್.ಡಿ. ರೇವಣ್ಣ ಕುಟುಂಬದ ರಾಜಕೀಯ ಭವಿಷ್ಯ ಅಂತ್ಯ ಎಂದೇ ಕ್ಷೇತ್ರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net