

ವಿಜಯವಾಣಿ ಸುದ್ದಿಜಾಲ ಆನೇಕಲ್ ಕೈಗಾರಿಕಾ ಪ್ರದೇಶದ ಕೋಟಿಗಟ್ಟಲೆ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಬಲಾಢ್ಯರು ಒತ್ತುವರಿ ಮಾಡಿಕೊಳ್ಳುವ ಹುನ್ನಾರದಿಂದ ರಾತ್ರೋರಾತ್ರಿ ಜೆಸಿಬಿ ಮೂಲಕ ಸರ್ಕಾರಿ ಕುಂಟೆಯನ್ನೂ ಬಿಡದೆ ಮುಚ್ಚಿ ಹಾಕಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಬೊಮ್ಮಸಂದ್ರ ಸರ್ವೇ ನಂ.234ರ ಸರ್ಕಾರಿ ಕುಂಟೆಯನ್ನು ಹಿಂದೆ ದನ ಕರುಗಳು ನೀರು ಕುಡಿಯಲು ಬಳಕೆ ಮಾಡಲಾಗುತ್ತಿತ್ತು. ಬುಟ್ಟಾ ರೆಡ್ಡಿ ಕುಂಟೆ ಎಂದು ಹಿಂದೆ ಹೆಸರುವಾಸಿಯಾಗಿತ್ತು. ಆದರೆ ಸ್ಥಳೀಯ ಮುಖಂಡರೊಬ್ಬರು ಸ್ವಂತ ಜಮೀನನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ ಪಕ್ಕದ ಸರ್ಕಾರಿ ಕುಂಟೆಯನ್ನು ಮುಚ್ಚಿ ಹಾಕಿದ್ದು, ಒತ್ತುವರಿ ಹುನ್ನಾರ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಎರಡು ದಿನಗಳ ಹಿಂದೆ ಮಾಹಿತಿ ಅರಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ತಡೆ ಹಿಡಿದು ಒತ್ತುವರಿ ಮಾಡದಂತೆ ಸೂಚನೆ ನೀಡಿದ್ದರು. ಅಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿ ಕುಂಟೆಯನ್ನು ಮುಚ್ಚಿ ಹಾಕಲಾಗಿದೆ. ಬೊಮ್ಮಸಂದ್ರ ಪುರಸಭೆಗೆ ಒಳಪಡುವ ಸರ್ಕಾರಿ ಕುಂಟೆಯನ್ನು ಕೆಐಡಿಬಿ ಅಧಿಕಾರಿಗಳು ನಿರ್ವಹಣೆ ಮಾಡಬೇಕು. ಆದರೆ ಕಂದಾಯ ಇಲಾಖೆ ಕೆಐಡಿಬಿ ಮತ್ತು ಪುರಸಭೆ ನಿರ್ಲಕ್ಷದಿಂದ ಪ್ರತಿಷ್ಠಿತ ಕೈಗಾರಿಕಾ ಪ್ರದೇಶದಲ್ಲಿರುವ ಭೂಮಿ ಸಾರ್ವಜನಿಕ ಬಳಕೆಗೂ ಬಾರದೆ ಬಲಾಢ್ಯರ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಒತ್ತುವರಿ ಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಮುಚ್ಚಿರುವ ಕುಂಟೆಯನ್ನು ಪುನರ್ ಸೃಷ್ಟಿಸಿದರೆ ದನ ಕರುಗಳಿಗೆ ನೀರು ಕುಡಿಯಲು ಅನುಕೂಲವಾಗುತ್ತದೆ. ಸುತ್ತಮುತ್ತಲಿನ ಪ್ರದೇಶದಿಂದ ಬರುವ ನೀರು ಈ ಕುಂಟೆಗೆ ಬಂದು ತುಂಬಿದರೆ ಅಕ್ಕಪಕ್ಕದ ಬಡಾವಣೆ ಹಾಗೂ ಕೈಗಾರಿಕೆಗಳಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರುವುದಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಕುಂಟೆ ಜಾಗವನ್ನು ಈ ಹಿಂದೆ ಬೊಮ್ಮಸಂದ್ರ ಪುರಸಭೆಗೆ ಹಸ್ತಾಂತರ ಮಾಡಿದ್ದು ಕೆಐಡಿಬಿ ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಆದರೆ ಪುರಸಭೆ ಅಧಿಕಾರಿಗಳು ಹಸ್ತಾಂತರ ಮಾಡಿದ ಜಾಗವನ್ನು ನಿರ್ವಹಣೆ ಮಾಡದೇ ಇರುವುದರಿಂದ ಇದನ್ನು ಒತ್ತುವರಿ ಮಾಡಿ ಕುಂಟೆ ಮುಚ್ಚಿರುವ ಮಾಹಿತಿ ತಿಳಿದು ತಕ್ಷಣ ಒತ್ತುವರಿದಾರರಿಗೆ ಸೂಚನೆ ನೀಡಿದ್ದೆವು. ಈ ಸಂಬಂಧ ಒತ್ತುವರಿದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. >ಮಹೇಶ್ ಕಂದಾಯ ನಿರೀಕ್ಷಕ ಬುಟ್ಟಾ ರೆಡ್ಡಿ ಕುಂಟೆಯನ್ನು ಹಿಂದೆ ಜಾನುವಾರುಗಳಿಗೆ ನೀರು ಕುಡಿಯಲು ಬಳಕೆ ಮಾಡಲಾಗುತ್ತಿತ್ತು. ಇತಿಹಾಸ ಇರುವ ಕುಂಟೆಯನ್ನು ಸ್ಥಳೀಯರೊಬ್ಬರು ಒತ್ತುವರಿ ಮಾಡಿ ಮುಚ್ಚಿ ಹಾಕುವ ಹುನ್ನಾರ ಮಾಡುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕುಂಟೆಯನ್ನು ಮೊದಲಿನಂತೆ ನಿರ್ಮಾಣ ಮಾಡಬೇಕು. ಕೋಟಿಗಟ್ಟಲೆ ಬೆಳೆಬಾಳುವ ಕುಂಟೆಯ ಜಾಗವನ್ನು ಒತ್ತುವರಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದೇಕೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. >ಲಿಂಗಣ್ಣ ತಾಪಂ ಮಾಜಿ ಸದಸ್ಯ