ಇತಿಹಾಸ ಪ್ರಜ್ಞೆಗೆ ಬೇಕು ಮಹಾತ್ಮರ ಮೂರ್ತಿ

12BK1
 ಬಸವಕಲ್ಯಾಣದಲ್ಲಿ ವೀರವೈರಾಗ್ಯನಿಧಿ ಅಕ್ಕಮಹಾದೇವಿ ಮೂರ್ತಿ ಅನಾವರಣ ಹಾಗೂ ಜಯಂತ್ಯುತ್ಸವನ್ನು ಶ್ರಿ ನಿಜಗುಣಪ್ರಭು ತೋಟದಾರ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು. ಶ್ರಿ ಡಾ.ಬಸವಲಿಂಗ ಪಟ್ಟದ್ದೇವರು, ಶ್ರಿ ಡಾ.ಸಿದ್ಧರಾಮ ಶರಣರು ಬೆಲ್ದಾಳ, ಪೂಜ್ಯ ಡಾ. ಗಂಗಾಂಬಿಕಾ ಅಕ್ಕ, ಪೂಜ್ಯ ಸತ್ಯಕ್ಕತಾಯಿ, ಶ್ರಿ ಡಾ.ಮಹಾಂತ ಬಸವಲಿಂಗ ಮಹಾಸ್ವಾಮೀಜಿ, ಶ್ರಿ ಬಸವಪ್ರಭು ಸ್ವಾಮೀಜಿ, ಶಶಿಕಾಂತ ದುರ್ಗೆ, ಬಸವರಾಜ ಬಾಲಿಕಿಲೆ ಇತರರಿದ್ದರು.
Published on

ಬಸವಕಲ್ಯಾಣ: ಇತಿಹಾಸ ಪ್ರಜ್ಞೆಗೆ ಮೂರ್ತಿಗಳು ಬೇಕು. ಮಾರ್ಗದರ್ಶನ ಮಾಡಿದವರ ಮೂರ್ತಿ ಸ್ಥಾಪಿಸಬೇಕು. ಆದರೆ ಕಾಲ್ಪನಿಕ ಲೋಕದ ಮೂರ್ತಿ ಸಂಸ್ಕೃತಿ ನಮ್ಮದಲ್ಲ. ಮಹಾತ್ಮರ ಮೂರ್ತಿ ಸಂಸ್ಕೃತಿ ನಮ್ಮದು. ಕತ್ತಲೆಯಿಂದ ಬೆಳಕಿನೆಡೆ, ಅಜ್ಞಾನದಿಂದ ಜ್ಞಾನದ ಕಡೆ, ಮೂಢನಂಬಿಕೆಯಿಂದ ಸತ್ಯದ ನಂಬಿಕೆ ಕಡೆ ತಂದವರ ಮೂರ್ತಿ ಸ್ಥಾಪಿಸಿರುವುದಾಗಿ ಎಂದು ಮುಂಡರಗಿ ಜಗದ್ಗುರು ತೋಂಟದಾರ್ಯ ಮಠದ ಶ್ರೀ ನಿಜಗುಣಪ್ರಭು ತೋಟದಾರ್ಯ ಸ್ವಾಮೀಜಿ ನುಡಿದರು.

ಅಕ್ಕಮಹಾದೇವಿ ಅನುಭಾವ ಪೀಠದಿಂದ ಬಂದವರ ಓಣಿಯ ಅಕ್ಕಮಹಾದೇವಿ ಗವಿಯಲ್ಲಿ ಶನಿವಾರ ಆಯೋಜಿಸಿದ್ದ ವೀರವೈರಾಗ್ಯನಿಧಿ ಅಕ್ಕಮಹಾದೇವಿ ಮೂರ್ತಿ ಅನಾವರಣ ಮತ್ತು ಜಯಂತ್ಯುತ್ಸವ ಉದ್ಘಾಟಿಸಿದ ಪೂಜ್ಯರು, ಮೂರ್ತಿ ಸ್ಥಾಪನೆ ಮೂಲಕ ಲಿಂಗಾಯತ ಇತಿಹಾಸ ಪರಂಪರೆ ಉಳಿಸುವ ಮತ್ತು ಮುಂದಿನ ಪೀಳಿಗೆಗೆ ತಿಳಿಹೇಳುವಂಥ ಕಾರ್ಯ ಇಲ್ಲಿ ನಡೆದಿದೆ ಎಂದರು.

ಅಕ್ಕನ ಮೂರ್ತಿ ಬಳಿ ಕುಳಿತು ಅವರ ವಚನಗಳನ್ನು ಓದಿ ಆದರ್ಶ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ ಅವರು, ಇತ್ತೀಚೆಗೆ ಶಾಲೆಯೊಂದರಲ್ಲಿ ಮುಟ್ಟಾದ ಬಾಲಕಿಯೊಬ್ಬಳನ್ನು ಹೊರಗೆ ಕೂಡಿಸಿ ಪರೀಕ್ಷೆ ಬರೆಸಿರುವುದನ್ನು ಈ ಸಭೆ ತೀವ್ರವಾಗಿ ಖಂಡಿಸುತ್ತದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂಥ ಬೆಳವಣಿಗೆ. ಇಂಥ ಮನಸ್ಥಿತಿ ಇನ್ನೂ ಇರುವುದು ನಾಚಿಕೆಗೇಡು ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಗ್ರಂಥ ಬಿಡುಗಡೆ ಮಾಡಿದ ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ, ನೇತೃತ್ವ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಬಾದಾಮಿಯ ಶ್ರೀ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ, ಸಮ್ಮುಖ ವಹಿಸಿದ್ದ ಪೂಜ್ಯ ಸತ್ಯಕ್ಕತಾಯಿ ಮಾತನಾಡಿದರು.

ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಗೋಣಿರುದ್ರ ಸ್ವಾಮೀಜಿ ಸಮ್ಮುಖ, ಬಿಡಿಪಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಕದಳಿ ವೇದಿಕೆಯ ಪುಷ್ಪಾವತಿ ಧಾರವಾಡ ಗುರುಪೂಜೆ ನೆರವೇರಿಸಿದರು. ಬಿಡಿಪಿಸಿ ನಿರ್ದೇಶಕಿ ವಿಜಯಲಕ್ಷ್ಮೀ ಗಡ್ಡೆ, ಪ್ರಮುಖರಾದ ಡಾ.ವಿಜಯಶ್ರೀ ಬಶೆಟ್ಟಿ, ಬಸವರಾಜ ಬಾಲಿಕಿಲೆ, ಜಗನ್ನಾಥ ಕುಶನೂರ, ಸಿ.ಬಿ. ಪ್ರತಾಪುರೆ, ಬಸವರಾಜ ರುದ್ರವಾಡಿ ಇತರರಿದ್ದರು. ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಬರೆದಿರುವ ವೀರವೈರಾಗ್ಯ ನಿಧಿ ಅಕ್ಕನ ಸಾಹಿತ್ಯ ದರ್ಶನ ಕೃತಿ ಬಿಡುಗಡೆ ಮಾಡಲಾಯಿತು.

ರಾಷ್ಟ್ರೀಯ ಬಸವದಳ ತಾಲೂಕು ಅಧ್ಯಕ್ಷ ರವೀಂದ್ರ ಕೊಳಕೂರ ಸ್ವಾಗತಿಸಿದರು. ಸಂತೋಷ ಮಡಿವಾಳ ವಂದಿಸಿದರು. ಜ್ಯೋತಿ ತೂಗಾಂವೆ ನಿರೂಪಣೆ ಮಾಡಿದರು. ಬೆಳಗ್ಗೆ ಪೂಜ್ಯರ ಸಾನ್ನಿಧ್ಯದಲ್ಲಿ ವಚನ ಪಠಣದೊಂದಿಗೆ ಅಕ್ಕಮಹಾದೇವಿ ಮೂರ್ತಿ ಸ್ಥಾಪನೆ, ತೊಟ್ಟಿಲು ಕಾರ್ಯಕ್ರಮ ಜರುಗಿತು.

ಇತಿಹಾಸ ಅಳಿಯದೆ ಉಳಿಯಬೇಕು. ಸತ್ಯ ಮತ್ತು ಸತ್ವ ಯಾವಾಗಲೂ ಶಾಶ್ವತವಾಗಿ ಉಳಿಯುತ್ತವೆ. ಮೂರ್ತಿಯಿಂದಾಗಿ ಅಕ್ಕನ ಚರಿತ್ರೆ ಭವಿಷ್ಯದಲ್ಲೂ ಉಳಿಯಲಿದೆ. ಅಕ್ಕನ ಎರಡು ಮೂರ್ತಿ ಅನಾವರಣ ಏಕಕಾಲಕ್ಕೆ ನಡೆದಿರುವುದು ಐತಿಹಾಸಿಕ. ಏನೇ ಬಂದರೂ ಸತ್ಯದ ದಾರಿಯಲ್ಲಿ ನಡೆಯಲು ಪ್ರಯತ್ನಿಸಬೇಕು.

| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದೇವರು

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು

ವೈರಾಗ್ಯನಿಧಿ ಅಕ್ಕಮಹಾದೇವಿ ಕಿರಿಯ ವಯಸ್ಸಿನ ವಿಶ್ವದ ಮಹೋನ್ನತ ಯೋಗಿಣಿ. ಬಾಲ್ಯದಲ್ಲಿ ಸರ್ವಸ್ವ ತ್ಯಾಗ ಮಾಡಿದ ಮಹಾತ್ಯಾಗಿ. ಶ್ರೀಕುಲದ ತಿಲಕವಾಗಿರುವ ಅಕ್ಕನ ಜೀವನ ಚರಿತ್ರೆ, ಆದರ್ಶ ಸ್ತ್ರೀಕುಲಕ್ಕೆ ಪ್ರೇರಣೆ. ಅಕ್ಕನ ತ್ಯಾಗ, ಸ್ವಾಭಿಮಾನ ಇಂದಿನ ಯುವತಿಯರಿಗೆ ಸ್ಫೂರ್ತಿ.

| ಶ್ರೀ ಡಾ.ಸಿದ್ದರಾಮ ಬೆಲ್ದಾಳ ಶರಣರು

ದೇಶಕ್ಕೆ ಆರ್ಯರು ಬರುವ ಮುನ್ನ ಪಂಚಭೂತಗಳನ್ನು ಐದು ಕಲ್ಲಿನ ರೂಪದಲ್ಲಿ ಪೂಜಿಸಲಾಗುತ್ತಿತ್ತು. ಅವರು ಬಂದ ನಂತರ ಕಲ್ಲಿಗೆ ದೇವರ ರೂಪ ಕೊಟ್ಟು ನಂಬಿಸಿದರು. ಪುರಾಣ ಕಾಲ್ಪನಿಕ ಕಾವ್ಯ ಕಲ್ಲಿನ ಮೂಲಕ ತಂದರು. ಮುಂದೆ ಶರಣರು ಕಲ್ಲು ದೇವರು ದೇವರಲ್ಲ. ಮಣ್ಣು ದೇವರು ದೇವರಲ್ಲ ಎಂದು ಹೇಳಿದರು. ಇದೆಲ್ಲವನ್ನು ಅಧ್ಯಯನ ಮೂಲಕ ತಿಳಿದುಕೊಳ್ಳಬೇಕು. ಅನುಕರಣ ಭಾಷಣ ಆಗದೆ ಅನುಭಾವ ಭಾಷಣಗಳಾಗಬೇಕು.

| ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ

ಸ್ತ್ರೀಕುಲದ ಮುಕುಟಮಣಿ ಅಕ್ಕಮಹಾದೇವಿ ಮಧ್ಯಕಾಲದ ಏಕೈಕ ಸ್ತ್ರೀ ತತ್ವಜ್ಞಾನಿ. ಅಕ್ಕನ ಮೂರ್ತಿ ದರ್ಶನ ಎಂದರೆ ಅಕ್ಕನ ವಚನ ದರ್ಶನ. ಅಕ್ಕನ ವಚನಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವುದೇ ಮೂರ್ತಿ ಸ್ಥಾಪನೆ ಹಿಂದಿನ ಆಶಯ.

| ಪೂಜ್ಯ ಡಾ.ಗಂಗಾಂಬಿಕಾ ಅಕ್ಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net