

ಚಿಕ್ಕಮಗಳೂರು: ಇತಿಹಾಸವನ್ನು ಅರಿಯದವರು ಇತಿಹಾಸವನ್ನು ನಿರ್ಮಿಸಲಾರರು. ಇತಿಹಾಸದ ತಳಹದಿಯ ಮೇಲೆ ಭವಿಷ್ಯದ ಬದುಕು ಕಟ್ಟಿಕೊಂಡರೆ ನಮ್ಮ ಬದುಕು ಹಸನಾಗುತ್ತದೆ. ಇತಿಹಾಸವನ್ನು ಅರಿಯುವುದರಿಂದ ನಮ್ಮ ಭವಿಷ್ಯದ ಹಾದಿ ನಿಚ್ಚಳವಾಗಿ ಕಾಣುತ್ತದೆ ಎಂದು ಲೇಖಕ ರವೀಶ್ ಕ್ಯಾತನಬೀಡು ಅಭಿಪ್ರಾಯಪಟ್ಟರು.
ತಾಲೂಕಿನ ಮಳಲೂರಿನ ನಾಡ ಮನೆಯ ಪ್ರಾಂಗಣದಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಜಾವಣಿಗೆ ನಾಡ ಸಮಿತಿಯಿಂದ ಏರ್ಪಡಿಸಿದ್ದ ಪುಸ್ತಕ ಓದು-ಉಪನ್ಯಾಸ-ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ ಕಂಪ್ಯೂಟರ್, ಮೊಬೈಲ್ ಹಾವಳಿಯಿಂದಾಗಿ ಓದುವ ಸಂಸ್ಕೃತಿ, ಹವ್ಯಾಸ ಕ್ಷೀಣಿಸುತ್ತಿದೆ. ಓದು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಓದು ನಮಗೆ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿ ಸುಸಂಸ್ಕೃತರನ್ನಾಗಿಸುತ್ತದೆ ಎಂದು ಕಿವಿಮಾತು ಹೇಳಿದರು.
ಸಾಹಿತಿ ಕುಂದೂರು ಅಶೋಕ್ ಬರೆದಿರುವ ಜಾವಣಿಗೆ ನಾಡ ಸಂಸ್ಕೃತಿ ಹಾಗೂ ಮಳಲೂರಮ್ಮನವರ ಜನಪದ ಜಾತ್ರೆ ಪುಸ್ತಕವು ಜಾವಣಿಗೆ ನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಮತ್ತು ಹದಿನಾರಳ್ಳಿ ನಾಡಿನ ಪಾಳೇಗಾರ ದ್ಯಾವಣ್ಣಗೌಡರ ಇತಿಹಾಸವನ್ನು ಕಣ್ಣ ಮುಂದೆ ತರುತ್ತದೆ ಎಂದರು.
ರೈತ ಮುಖಂಡ ಕೆ.ಕೆ.ಕೃಷ್ಣೇಗೌಡ ಮಾತನಾಡಿ, ನಾಡಿನ ಇತಿಹಾಸದ ಕುರುಹುಗಳು ಹಾಗೂ ಅವಶೇಷಗಳು ನಮ್ಮ ಕಣ್ಣ ಮುಂದೆಯೇ ನಾಮಾವಶೇಷವಾಗುತ್ತಿರುವುದು ನೋವಿನ ಸಂಗತಿ. ಅವುಗಳನ್ನು ಜತನದಿಂದ ಕಾಪಾಡಿ ಮುಂದಿನ ಪೀಳಿಗೆಗೆ ಉಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಾವಣಿಗೆ ನಾಡ ಸಮಿತಿಯ ವ್ಯವಸ್ಥಾಪಕ ಶರಣ್ ಕಲ್ಲಹಳ್ಳಿ, ಲೇಖಕ ಕುಂದೂರು ಅಶೋಕ್ ಸ್ಥಳೀಯ ಇತಿಹಾಸ ಪರಂಪರೆಯನ್ನು ಉಳಿಸಲು ಬರೆವಣಿಗೆಯ ಮೂಲಕ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್, ಸ್ಥಳೀಯವಾಗಿ ಬೆಳಕಿಗೆ ಬಾರದ ಅನೇಕ ಸಂಗತಿಗಳು ನಮ್ಮ ಕಣ್ಣ ಮುಂದೆಯೇ ಭೂಗರ್ಭ ಸೇರುತ್ತಿದ್ದು, ಅಂತಹ ಸಂಗತಿಗಳಿಗೆ ಆಧಾರ ಒದಗಿಸಿದರೆ ಇಂದಿನ ಸಾಹಿತ್ಯ ನಾಳಿನ ಇತಿಹಾಸವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವ್ಯಕ್ತಿತ್ವದ ಬೆಳವಣಿಗೆಗಾಗಿ ಪ್ರತಿಯೊಬ್ಬರೂ, ವಿಶೇಷವಾಗಿ ಗ್ರಾಮೀಣ ಜನ ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಒಂದು ಪತ್ರಿಕೆಯನ್ನಾದರೂ ಓದಬೇಕು ಎಂದು ತಿಳಿಸಿದರು.
ನಾಡ ಮನೆ ವಂಶಸ್ಥರಾದ ಎಂ.ಎಲ್.ಚAದ್ರೇಗೌಡ, ದಾಕ್ಷಾಯಿಣಿ, ಸಾಹಿತಿ ಡಿ.ಎಂ.ಮಂಜುನಾಥ ಸ್ವಾಮಿ, ಶಿಕ್ಷಕ ಸೋಮಶೇಖರ್, ಉಪನ್ಯಾಸಕ ಕೆ.ಎಂ.ಪ್ರದೀಪ್ ಉಪಸ್ಥಿತರಿದ್ದರು.