ಇಡ್ಲಿ ಸೀದಿದೆ, ನೀರು ಚಟ್ನಿ ಏನ್ರಿ ಇದು?

Indira
Published on

ಚಿತ್ರದುರ್ಗ: ಇಡ್ಲಿ ಸೀದು ಹೋಗಿದೆ. ಚಟ್ನಿ ನೀರಾಗಿದೆ. ಉಪ್ಪಿಟ್ಟಿಗೆ ಉಪ್ಪು ಹೆಚ್ಚಾಗಿದೆ. ಏನ್ರಿ ಈಗ ಅಡುಗೆ ಮಾಡೋದು ಎಂದು ನಗರಸಭೆ ಅಧ್ಯಕ್ಷೆ ಸುಮಿತಾ ಇಂದಿರಾ ಕ್ಯಾಂಟಿನ್ ಸಿಬ್ಬಂದಿಗೆ ಪ್ರಶ್ನಿಸಿದರು.

ಪ್ರವಾಸಿ ಮಂದಿರ ಸಮೀಪದ ಕ್ಯಾಂಟಿನ್‌ನಲ್ಲಿ ಮಂಗಳವಾರ ಉಪಹಾರ ಸೇವಿಸಿ, ಶುಚಿ-ರುಚಿ ಗುಣಮಟ್ಟ ಪರಿಶೀಲಿಸಿದರು.

ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳು, ಕಾರ್ಮಿಕರು, ಬಡವರು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಬರುವುದರಿಂದ ಕಳಪೆ ತಿಂಡಿ, ಊಟ ನೀಡಿದರೆ, ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಉಪ್ಪಿಟ್ಟಿಗೆ ಈರುಳ್ಳಿ, ಟೊಮ್ಯಾಟೋ, ಹಸಿಮೆಣಸಿನಕಾಯಿ, ಕೊತ್ತಂಬರಿ, ಕೊಬ್ಬರಿ ಹಾಕಿ ತಯಾರಿಸಿದರೆ, ರುಚಿಯಾಗಿರುತ್ತದೆ. ಗಂಜಿಯಂತೆ ಮಾಡಿದರೆ ಯಾರ‌್ರಿ ತಿನ್ನುತ್ತಾರೆ. ಇಡ್ಲಿ ಚೆನ್ನಾಗಿ ಬೇಯಿಸಿ. ಆದರೆ, ಸೀದು ಹೋಗಬಾರದು. ಚಟ್ನಿ ಸ್ವಲ್ಪ ಗಟ್ಟಿಯಿರಲಿ. ಕುಡಿಯುವ ನೀರಿಗೆ ಪ್ಲಾಸ್ಟಿಕ್ ಬದಲು ಸ್ಟೀಲ್ ಲೋಟ ಬಳಸಿ ಎಂದು ಸೂಚಿಸಿದರು.

ಪರಿಸರ ಇಂಜಿನಿಯರ್ ಜಾಫರ್, ಸಹಾಯಕ ಇಂಜಿನಿಯರ್ ಹಮೀದ್, ಆರೋಗ್ಯ ನಿರೀಕ್ಷಕ ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net