

ಶೃಂಗೇರಿ: ಭಗವದ್ಗೀತೆಯಲ್ಲಿರುವ ಸಂದೇಶ ಹಿಂದು ಧರ್ಮಕ್ಕೆ ಮೀಸಲಾಗದೆ ಇಡೀ ಮನುಕುಲಕ್ಕೆ ಜೀವನ ಮೌಲ್ಯ ನೀಡುವ ಶ್ರೇಷ್ಠ ಗ್ರಂಥವಾಗಿದೆ ಎಂದು ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.
ಶ್ರೀಮಠದ ಗುರುಭವನದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಶುಕ್ರವಾರ ಏರ್ಪಡಿಸಿದ್ದ ಚಾತುರ್ಮಾಸ್ಯ ನಿರತ ಜಗದ್ಗುರುಗಳ ದರ್ಶನ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ಚಿಕ್ಕ ವಿಷಯದಿಂದ ಎಲ್ಲ ವಿಚಾರ ಒಳಗೊಂಡ ಗ್ರಂಥವಾಗಿದ್ದು, ನಾವೆಲ್ಲರೂ ಜಾತಿ, ಭೇದವಿಲ್ಲದೆ ಪ್ರತಿ ದಿನವೂ ಪಠಣ ಮಾಡಬೇಕು ಎಂದರು.
ಭಗವದ್ಗೀತೆ ಸಂಸ್ಕೃತದಲ್ಲಿದ್ದರೂ ಅದನ್ನು ಓದಿದಾಗ ಮನಸ್ಸಿಗೆ ಮುದ ನೀಡುವುದಲ್ಲದೇ, ಸಂಸ್ಕಾರ ಕಲಿಸುತ್ತದೆ. ಭಗವಂತನೇ ನೇರವಾಗಿ ಉಪದೇಶ ನೀಡಿರುವ ಸಾರವೇ ಭಗವದ್ಗೀತೆಯಾಗಿದೆ. ನಾವು ಆಚರಿಸಿಕೊಂಡು ಬಂದಿರುವ ಧರ್ಮವನ್ನು ಕೈಬಿಡಬಾರದು. ಧರ್ಮ ಎಂಬ ಸಂಪತ್ತನ್ನು ಕಾಪಾಡಿಕೊಳ್ಳಬೇಕು. ಧರ್ಮವನ್ನು ನಾವು ಪಾಲಿಸಿದರೆ ಉಳಿದೆಲ್ಲ ಸಂಪತ್ತು ನಮಗೆ ಬರುತ್ತದೆ. ಭಗವದ್ಗೀತೆಯಲ್ಲಿ ಜೀವನಕ್ಕೆ ಯಾವುದೇ ಕೆಲಸ ಮಾಡಿದರೂ ಅದನ್ನು ಪ್ರಾಮಾಣಿಕತೆಯಿಂದ ಶ್ರದ್ಧೆಯಿಂದ ಮಾಡು ಎಂದು ಹೇಳಲಾಗಿದೆ. ಕೆಲಸ ಮಾಡುವ ಮುನ್ನವೇ ಫಲ ನಿರೀಕ್ಷೆ ಮಾಡಬಾರದು. ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಶ್ರೇಷ್ಠ ಫಲ ದೊರಕುತ್ತದೆ ಎಂದು ತಿಳಿಸಿದರು.
ಸಮಾಜದ ಅಧ್ಯಕ್ಷ ವಿಜಯರಂಗ ಕೋಟೇತೋಟ ಮಾತನಾಡಿ, ಸಮಾಜದ ಬಂಧುಗಳು ಪ್ರತಿ ವರ್ಷ ಸಾಮೂಹಿಕವಾಗಿ ಗುರುದರ್ಶನ ಮಾಡುತ್ತಿದ್ದಾರೆ. ಜಗದ್ಗುರುಗಳ ಆದೇಶದಂತೆ ಸಮಾಜದ 40ಕ್ಕೂ ಹೆಚ್ಚು ಜನರು ಭಗವದ್ಗೀತೆಯ 18 ಅಧ್ಯಾಯ ಕಂಠಪಾಠ ಮಾಡಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೀ ಗಾಯತ್ರಿ ಜಪ ಸಮಾಜ ಬಂಧುಗಳು ಮಾಡುತ್ತಿದ್ದು, ಗಾಯತ್ರಿ ಹೋಮ ನಡೆಸಲಾಗಿದೆ ಎಂದರು.
ಶ್ರೀಮಠದ ಯಾಗ ಶಾಲೆಯಲ್ಲಿ ಗಾಯತ್ರಿ ಹೋಮದ ಪೂರ್ಣಾಹುತಿ ನಡೆಯಿತು. ಜಗದ್ಗುರುಗಳಿಗೆ ಸಮಾಜದಿಂದ, ಶಾರದಾ ಸೌಹರ್ದ ಸಂಘ ಮತ್ತು ಮೇಗೂರು ದೇವಸ್ಥಾನದಿಂದ ಫಲ, ಪುಷ್ಪ, ಬಿಕ್ಷಾ ಕಾಣಿಕೆ, ವಸ್ತ್ರ ಸಮರ್ಪಣೆ ಮಾಡಲಾಯಿತು.
ಗುರುದರ್ಶನ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಶಂಕರನಾರಾಯಣ, ಜಿ.ಸಿ.ಗೋಪಾಲಕೃಷ್ಣ, ರಾಮಚಂದ್ರ, ಹೆಬ್ಬಿಗೆ ಗಣೇಶ್, ಚರಣ್ ಹೆಬ್ಬಾರ್, ಗಾಡಿಕೆರೆ ಸತ್ಯನಾರಾಯಣ, ಶಿವಶಂಕರ್, ಭವಾನಿ ಹೆಬ್ಬಾರ್, ರೂಪಾ ರಾಜೇಂದ್ರ ಇತರರಿದ್ದರು.