ಇಡೀ ಜಗತ್ತಿಗೆ ವಿಜ್ಞಾನ ಪರಿಚಯಿಸಿದ್ದು ಭಾರತೀಯರು ; ಅಶೋಕ್ ಹಾರನಹಳ್ಳಿ

ಇಡೀ ಜಗತ್ತಿಗೆ ವಿಜ್ಞಾನ ಪರಿಚಯಿಸಿದ್ದು ಭಾರತೀಯರು ; ಅಶೋಕ್ ಹಾರನಹಳ್ಳಿ
Published on


ಹಾಸನ: ಪ್ರಾಚೀನ ಭಾರತದ ಪಾರಂಪರಿಕ ಜ್ಞಾನ ಭಂಡಾರ ಎಲ್ಲರಿಗೂ ಲಭ್ಯವಾಗಬೇಕು. ಶಿಕ್ಷಕರು ಇಂದಿನ ಪೀಳಿಗೆಗೆ ಭಾರತೀಯ ವಿಜ್ಞಾನದ ಇತಿಹಾಸ ತಿಳಿಸಿ ವಿಶೇಷ ಸಾಧನೆಗೆ ಪ್ರೇರೇಪಿಸಬೇಕು. ಅದು ನಮ್ಮ ಆದ್ಯ ಕರ್ತವ್ಯ ಆಗಬೇಕು ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಹೇಳಿದರು.

ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಸಂಜೆ ‘ಪ್ರಜ್ಞಾ ಪ್ರವಾಹ’ ವೇದಿಕೆಯಿಂದ ನಡೆದ ‘ಪ್ರಾಚೀನ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ವಿಜ್ಞಾನ ಪರಿಚಯಿಸಿದ್ದು ಭಾರತೀಯರು. ಆದರೆ ನಮ್ಮಿಂದ ಪಡೆದ ಜ್ಞಾನವನ್ನು ವಿದೇಶಿಯರು ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಭಾರತದ ಪ್ರಾಚೀನ ವಿಜ್ಞಾನಿಗಳು ಯಾವುದೇ ಸ್ವಾರ್ಥ ಇಲ್ಲದೆ ತಮ್ಮಲ್ಲಿದ್ದ ಜ್ಞಾನವನ್ನು ಜಗತ್ತಿನೆಲ್ಲೆಡೆ ಹಂಚಿದ್ದಾರೆ. ಆದರೆ ಭಾರತೀಯರು ನೀಡಿದ ಅಮೂಲ್ಯ ಜ್ಞಾನವನ್ನು ತನ್ನದೆಂದು ಹೇಳಿಕೊಂಡು ವಿದೇಶಿಯರು ಸಂಕುಚಿತರಾಗಿದ್ದಾರೆ. ಇಂದಿನ ಪೀಳಿಗೆಗೆ ಈ ವಿಷಯ ಗೊತ್ತಿಲ್ಲದೆ ಇರುವುದರಿಂದ ಭಾರತದ ಬಗ್ಗೆ ಅಭಿಮಾನ ಕಡಿಮೆ ಆಗುತ್ತಿದೆ. ಹಾಗಾಗಿ ಮಕ್ಕಳಿಗೆ ಪ್ರಾಚೀನ ಭಾರತದ ಶ್ರೇಷ್ಟತೆ ಕುರಿತು ತಿಳಿಸುವ ಕೆಲಸ ಆಗಬೇಕು ಎಂದರು.

ಪ್ರಜ್ಞಾ ಪ್ರವಾವ ವೇದಿಕೆಯ ಕ್ಷೇತ್ರಿಯ ಸಂಯೋಜಕ ರಘುನಂದನ್ ಮಾತನಾಡಿ, ವಿಜ್ಞಾನ ಕ್ಷೇತ್ರಕ್ಕೆ ಪ್ರಾಚೀನ ಭಾರತದ ಕೊಡುಗೆ ಅನನ್ಯವಾದುದು. ಈ ಬಗ್ಗೆ ವಿದ್ಯಾರ್ಥಿಗಳು ಹೆಮ್ಮೆ ಬೆಳೆಸಿಕೊಂಡು ಆಧುನಿಕ ವಿಜ್ಞಾನಕ್ಕೆ ಹೆಚ್ಚಿನ ಕೊಡುಗೆ ನೀಡಲು ಮುಂದಾಗಬೇಕು. ಭರತೀಯ ತತ್ವಶಾಸ್ತ್ರ ಇಡೀ ಜಗತ್ತಿಗೆ ಮಾಗದರ್ಶಕವಾಗಿದೆ. ಈ ಕುರಿತು ಖ್ಯಾತ ವಿಜ್ಞಾನಿಗಳಾದ ಐನ್‌ಸ್ಟೇನ್ ಅವರೇ ಹೇಳಿದ್ದಾರೆ. ಭಾರತೀಯ ದರ್ಶನ ಶಾಸ್ತ್ರ, ಸಂಗೀತ ಶಾಸ್ತ್ರ, ಗಣಿತಶಾಸ್ತ್ರ ಎಲ್ಲವೂ ಅನನ್ಯವಾದವುಗಳೇ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರವಾಹ ಜಿಲ್ಲಾ ಸಂಯೋಜಕ ಡಾ. ರಾಮನಾಥ್, ಮಲೆನಾಡು ವಿದ್ಯಾಸಂಸ್ಥೆಯ ಪದಾಧಿಕಾರಿಗಳಾದ ಎಸ್.ಬಿ. ವೆಂಕಟೇಶ್, ಪ್ರದೀಪ್, ಆರ್.ಟಿ. ದ್ಯಾವೇಗೌಡ, ಪಾರ್ಶನಾಥ್, ಗುರುಮೂರ್ತಿ, ಶಿವರಾಮ್ ಕೃಷ್ಣಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net