

ಭದ್ರಾವತಿ: ತಾಲೂಕಿನಲ್ಲಿ ಕರೊನಾ ವೈರಸ್ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ವಿದೇಶದಿಂದ ಆಗಮಿಸುವ ಪ್ರವಾಸಿಗರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸಂಚರಿಸುತ್ತಿದ್ದ ಇಟಲಿ ಮೂಲದ ಇಬ್ಬರು ಪ್ರಜೆಗಳನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಅವರ ಆರೋಗ್ಯ ತಪಾಸಣೆ ನಡೆಸಲಾಯಿತು. ಕಾಯಿಲೆ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಳಿಸಲಾಯಿತು.
ಪ್ರವಾಸದ ಹಿನ್ನೆಲೆಯಲ್ಲಿ ಬೇರೆಡೆಯಿಂದ ತಾಲೂಕಿಗೆ ಆಗಮಿಸಿರುವವರ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ತಾಲೂಕಿನ ಹಳ್ಳಿಯೊಂದಕ್ಕೆ ಚೀನಾದಿಂದ ಆಗಮಿಸಿದ್ದ ನಾಲ್ವರನ್ನು ತಪಾಸಣೆ ತಪಾಸಣೆಗೊಳಪಡಿಸಿ 28 ದಿನಗಳ ಕಾಲ ಸಂಪರ್ಕದಲ್ಲಿದ್ದು ಅವರಲ್ಲಿ ಸೋಂಕು ಇಲ್ಲದಿರುವುದನ್ನು ದೃಢಪಡಿಸಿಕೊಂಡಿದ್ದರು.
ನಗರದ ದೊಣಬಘಟ್ಟದ ಕುಟುಂಬವೊಂದು 4 ದಿನಗಳ ಹಿಂದೆ ದುಬೈನಿಂದ ಬಂದಿದ್ದು ಕುಟುಂಬದ ಒಬ್ಬರು ಜ್ವರದಿಂದ ಬಳಲುತ್ತಿದ್ದು, ತಪಾಸಣೆ ವೇಳೆ ನೆಗೆಟಿವ್ ವರದಿ ಬಂದಿದೆ.
ಹೊರದೇಶದಿಂದ ಇಲ್ಲಿಗೆ ಬಂದವರು ಹಾಗೂ ಇಲ್ಲಿಂದ ಹೊರದೇಶ ಇಲ್ಲವೇ ಸೋಂಕಿತ ಜಿಲ್ಲೆಗಳಿಗೆ ಹೋಗಿ ಬಂದವರು ಸ್ವಯಂ ವರದಿ ಮಾಡಿಕೊಳ್ಳಬೇಕು. ಶೀತ, ಕೆಮ್ಮು, ಜ್ವರದ ಲಕ್ಷಣ ಕಂಡುಬಂದಲ್ಲಿ ಕೂಡಲೆ ಆಸ್ಪತ್ರೆಗೆ ದಾಖಲಾಗಿ ಪ್ರಯಾಣ ಮಾಡಿದ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಸಾರ್ವಜನಿಕರು ತಾವು ವಾಸಿಸುವ ಸ್ಥಳಗಳಲ್ಲಿ ಫೆ.15ರ ನಂತರ ಯಾರಾದರೂ ಹೊರದೇಶದಿಂದ ಬಂದಿದ್ದಲ್ಲಿ ಅದರ ಮಾಹಿತಿಯನ್ನು ಸಾರ್ವಜನಿಕ ಆಸ್ಪತ್ರೆ ವೈದ್ಯರು ಇಲ್ಲವೇ ಸಿಬ್ಬಂದಿಗೆ ನೀಡುವಂತೆ ಟಿಎಚ್ಒ ಡಾ. ಎಂ.ಆರ್.ಗಾಯತ್ರಿ ಮನವಿ ಮಾಡಿದ್ದಾರೆ.