

ಐ.ಎ.ಎಸ್-ಕೆ.ಎ.ಎಸ್ ತರಬೇತಿ ಕಾರ್ಯಗಾರ
ಬೆಳಗಾವಿ: ಇಚ್ಛಾಶಕ್ತಿ, ನಿರಂತರ ಪರಿಶ್ರಮ, ಏಕಾಗ್ರತೆಯಿಂದ ಯಶಸ್ಸು ಸಾಧ್ಯ. ಐ.ಎ.ಎಸ್- ಕೆ.ಎ.ಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹಿಂಜರಿಕೆ ಬೇಡ, ನಿರಂತರ ಅಭ್ಯಾಸ, ಪ್ರಯತ್ನದಿಂದ ಆಕಾಂಕ್ಷಿಗಳು ತಮ್ಮ ಗುರಿ ಸಾಧಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕೈಗಾರಿಕಾ ತರಬೇತಿ, ಉದ್ಯೋಗ ಆಯುಕ್ತಾಲಯ, ಜಿಲ್ಲಾಡಳಿತ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಶನಿವಾರ (ಸೆ.2) ಐ.ಎ.ಎಸ್ ಹಾಗೂ ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಿಗಾಗಿ ಆಯೋಜಿಸಲಾದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಯುವಕರು ತಮ್ಮ ಸಾಧನೆಯ ಮೂಲಕ ತಂದೆ ತಾಯಿ, ಗ್ರಾಮ, ಜಿಲ್ಲೆ ಹೆಮ್ಮೆಪಡುವಂತೆ ಮಾಡಬೇಕು. ಪ್ರತಿ ವಿಧ್ಯಾರ್ಥಿಗಳ ಮನಸ್ಸಿನಲ್ಲಿ ನಮ್ಮಿಂದ ಐ.ಎ.ಎಸ್- ಕೆ .ಎ.ಎಸ್ ಮಾಡಬಹುದಾ ಎಂಬ ಅನುಮಾನ ಹೋಗಲಾಡಿಸಿ ನಾನು ಕೂಡಾ ಇಂತಹ ಪರೀಕ್ಷೆಗಳನ್ನು ಎದುರಿಸಬಲ್ಲೆ ಎಂಬ ದೃಢ ಸಂಕಲ್ಪ ಹೊಂದಬೇಕು. ಶ್ರದ್ಧೆ, ನಿಷ್ಠೆ ಹಾಗೂ ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯ ಎಂದು ಹೇಳಿದರು.
ಕನ್ನಡ ಮಾಧ್ಯಮದ ಹಿಂಜರಿಕೆ ಬೇಡ: ಕನ್ನಡ ಮಾಧ್ಯಮ ಎಂಬ ಹಿಂಜರಿಕೆ ಬೇಡ, ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯ ಮುಖ್ಯವಾಗಿದೆ. ಅನೇಕ ಸಾಧಕರು ಕನಿಷ್ಠ 3 ರಿಂದ 6 ವರ್ಷ ಓದಿ ಪಾಸ್ ಆಗಿರುವಂತಹ ಉದಾಹರಣೆಗಳಿವೆ, ಆದ್ದರಿಂದ ಆಕಾಂಕ್ಷಿಗಳು ಸ್ವ-ಇಚ್ಛಾ ಶಕ್ತಿಯಿಂದ ಬಯಸಿದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಕಷ್ಟಪಟ್ಟು ನಿರಂತರ ಅಭ್ಯಾಸ ಮಾಡಬೇಕು. ನಿಗದಿತ ಸಮಯ ವಿಂಗಡಿಸಿ ಏಕಾಗ್ರತೆಯಿಂದ ಕನಿಷ್ಠ 8 ರಿಂದ 10 ಗಂಟೆಯ ವರಗೆ ವಿಧ್ಯಾಭ್ಯಾಸ ಮಾಡಬೇಕು ಎಂದರು. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರ ಈಗಾಗಲೇ ಅನೇಕ ಸೌಲಭ್ಯಗಳನ್ನು ನೀಡಿದೆ. ಇದರ ಸದುಪಯೋಗ ಪಡೆದುಕೊಂಡು ನೀವು ಕೂಡಾ ಉನ್ನತ ಸ್ಥಾನ ಮಾನಗಳನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ಅವರು ಸಲಹೆ ನೀಡಿದರು.
ಪ್ರಚಲಿತ ಮಾಹಿತಿ ಸಂಗ್ರಹ ಅಗತ್ಯ: ಈ ವೇಳೆ ತಮ್ಮ ಅನುಭವ ಹಂಚಿಕೊಂಡ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಸಾಹಿತ್ಯ. ಎಂ.ಎ ಅವರು ಯು.ಪಿ.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಓದಿನ ಜೊತೆಗೆ ಸುತ್ತಮುತ್ತಲಿನ ವಾತಾವರಣ ಗಮನಿಸಿದಾಗ ಪ್ರಚಲಿತ ಮಾಹಿತಿ ಸಿಗುತ್ತದೆ. ನಿಮ್ಮ ಆಯ್ಕೆ ಕ್ಷೇತ್ರದಲ್ಲಿ ಸಾಧನೆ ಮಾಡಲು ಆಳವಾದ ಅಧ್ಯಯನ ಮಾಡಬೇಕು. ಪ್ರತಿ ವಿಷಯ ಕುರಿತು ಸಮಗ್ರ ಮಾಹಿತಿ ದೊರೆತಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತೀರ್ಣರಾಗಲು ಸಹಾಯವಾಗಲಿದೆ ಎಂದರು. ಪ್ರತಿ ನಿತ್ಯ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದಲು ಕೋಚಿಂಗ್ ಸೆಂಟರ್ ಅವಶ್ಯವಿಲ್ಲ. ಕೋಚಿಂಗ್ ಸೆಂಟರ್ ಬೇಕೇಬೇಕು ಎಂಬ ಅನಿವಾರ್ಯತೆ ಇದ್ದರೆ ಮಾತ್ರ ಹೋಗಿ, ಬದಲಿಗೆ ಈಗಾಗಲೇ ಮಾಹಿತಿಗಾಗಿ ಇಂಟರ್ ನೆಟ್, ಸಾಮಾಜಿಕ ಜಾಲತಾಣಗಳಿವೆ. ಅದೇ ರೀತಿಯಲ್ಲಿ ಯೂ ಟ್ಯೂಬ್ ನಲ್ಲಿ ಕೋಚಿಂಗ್ ಕ್ಲಾಸ್, ಸ್ಕಿಲ್ ಡೆವಲಪ್ಮೆಂಟ್ ವಿಡಿಯೋಗಳ ಮೂಲಕ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಅಭ್ಯಾಸ ಮಾಡಬಹುದಾಗಿದೆ ಎಂದು ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗಜಾನನ ಬಾಳೆ ಅವರು ತಿಳಿಸಿದರು. ಪ್ರೋಬೇಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಹಣಕಾಸು ಇಲಾಖೆಯ ಜಂಟಿ ನಿರ್ದೇಶಕರ ಶಂಕರಾನಂದ ಬನಶಂಕರಿ, ಬೆಂಗಳೂರು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ಜಂಟಿ ನಿರ್ದೇಶಕರಾದ ಸಾಧನಾ ಪೋಟೆ, ಬೆಳಗಾವಿ ಉಪವಿಭಾಗಾಧಿಕಾರಿಳಾದ ಶ್ರವಣ ನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ಬಬಲಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಪ್ರಿಯ ಕಡೆಚೂರ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಬ್ದುಲ್ ರಶೀದ್ ಮೀರ್ಜನ್ನವರ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು