ಇಎಸ್‌ಐ ಆಸ್ಪತ್ರೆಗೆ ಶಿಲಾನ್ಯಾಸ

000000
Published on

ವಿಜಯವಾಣಿ ಸುದ್ದಿಜಾಲ ಆನೇಕಲ್

ಆನೇಕಲ್ ವಿಧಾನಸಭಾ ಕ್ಷೇತ್ರದ ಇಗ್ಗಲೂರು ಬಳಿ 200 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಶಿಲಾನ್ಯಾಸ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ದೆಹಲಿ ಹಾಗೂ ಪಶ್ಚಿಮ ಬಂಗಾಳದಲ್ಲಿನ ಜನರಿಗೆ ಆಯುಷ್ಮಾನ್ ಯೋಜನೆ ತಲುಪಿಸಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಅಲ್ಲಿನ ಸರ್ಕಾರಗಳ ಕೆಟ್ಟ ಆಡಳಿತವೇ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು. ಜನರ ಪರವಾದ ಯೋಜನೆ ಜಾರಿಗೆ ತರಬೇಕಾದರೆ ಜನಪರ ಚಿಂತಿಸುವ ಸರ್ಕಾರದ ಅವಶ್ಯವೂ ಇರುತ್ತದೆ ಎಂದರು.

ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಆದಾಗ ಜನ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಸಂಸದ ಡಾ.ಮಂಜುನಾಥ್ ಹೇಳಿದರು. ಇಗ್ಗಲೂರು ಗ್ರಾಮದ ಬಳಿ ಇಎಸ್‌ಐ ಆಸ್ಪತ್ರೆ ಕಾಮಗಾರಿ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಭಾರತ ಕ್ರಾಂತಿಯನ್ನೇ ಮಾಡುತ್ತಿದೆ, ಈ ನಿಟ್ಟಿನಲ್ಲಿ ದೇಶ ಮುಂಚೂಣಿಯಲ್ಲಿದೆ ಎಂದರು. ಆಯುಷ್ಮಾನ್ ಭಾರತ್ ಯೋಜನೆ ಖಾಸಗಿ ಆಸ್ಪತ್ರೆಗಳಲ್ಲೂ ಸಿಗಬೇಕು. ಇದಕ್ಕೆ ರಾಜ್ಯ ಸರ್ಕಾರ ಕೆಲವು ಬದಲಾವಣೆಗಳನ್ನು ತಂದು ಸಹಕಾರ ನೀಡಬೇಕಿತ್ತು. ಇದು ಆದಾಗ ಇನ್ನಷ್ಟು ಸಹಕಾರಿ ಆಗಲಿದೆ. ಎರಡುವರೆ ವರ್ಷದಲ್ಲಿ ಆಸ್ಪತ್ರೆಯ ಕಾಮಗಾರಿ ಮುಗಿಸುವ ಭರವಸೆ ನೀಡಲಾಗಿದೆ ಎಂದರು.

ತಾಲೂಕಿಗೆ ಸಂದ ಗೌರವ: 289 ಕೋಟಿ ರೂ.ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ 200 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಈ ಹಿಂದೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮವಿದೆ, ಈ ಸಂದರ್ಭದಲ್ಲಿ ಅವರನ್ನು ನೆನಪು ಮಾಡಿಕೊಳ್ಳಬೇಕು ಎಂದು ಶಾಸಕ ಬಿ.ಶಿವಣ್ಣ ಹೇಳಿದರು. ಆಸ್ಪತ್ರೆ ನಿರ್ಮಾಣ ಆಗುತ್ತಿರುವ ಜಾಗವನ್ನು ಕಸಾಯಿ ಖಾನೆ ಮಾಡಬೇಕು ಎಂದು ನಿರ್ಧಾರ ಮಾಡಲಾಗಿತ್ತು, ಆದರೆ ಇದರ ವಿರುದ್ಧ ಹೋರಾಟ ನಡೆಸಿ ಈಗ ಆಸ್ಪತ್ರೆ ನಿರ್ಮಾಣ ಆಗುತ್ತಿರುವುದು ತಾಲೂಕಿಗೆ ಸಂದ ಗೌರವ ಎಂದರು. ಚಂದಾಪುರ ಪುರಸಭಾ ವ್ಯಾಪ್ತಿಯ ಇಗ್ಗಲೂರು ಬಳಿ ಆಸ್ಪತ್ರೆ ನಿರ್ಮಾಣ ಆಗುತ್ತಿದ್ದು, ಮೋದಿ ಇದಕ್ಕೆ ಶಿಲನ್ಯಾಸ ನೆರವೇರಿಸಿರುವುದು ನಮ್ಮ ಸೌಭಾಗ್ಯವಾಗಿದೆ, ಆದಷ್ಟು ಬೇಗ ಇದರ ಸೇವೆ ದೊರೆಯುವಂತಾಗಲಿ ಎಂದು ಪುರಸಭಾ ಅಧ್ಯಕ್ಷೆ ಶಾರದಾ ವರದರಾಜು ಹೇಳಿದರು.

ಹಿಂದೆಯೇ ಮಂಜೂರಾಗಬೇಕಿತ್ತು: ನಮ್ಮ ಭಾಗಕ್ಕೆ ಈ ಹಿಂದೆಯೇ ಆಸ್ಪತ್ರೆ ಮಂಜೂರಾಗಬೇಕಿತ್ತು, ಆದರೆ ಕೆಲವು ರಾಜಕೀಯ ಕಾರಣದಿಂದ ವಿಳಂಬವಾಗಿತ್ತು ಎಂದು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಸಾದ್ ಹೇಳಿದರು. ಆದಷ್ಟು ಬೇಗ ಕಾಮಗಾರಿ ಮುಗಿದು ಈ ಭಾಗದ ಕಾರ್ಮಿಕರಿಗೆ ಸಹಾಯ ಆಗಬೇಕು, ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಣಮಟ್ಟ ಕಾಪಾಡಿಕೊಳ್ಳುವುದು ಅತ್ಯವಶ್ಯಕ ಎಂದರು. ಮೋದಿ ಭಾಷಣದ ವೇಳೆ ಕೈಕೊಟ್ಟ ಇಂಟರ್ ನೆಟ್: ಕಾಮಗಾರಿ ಶಿಲಾನ್ಯಾಸದ ಬಳಿಕ ಮೋದಿ ಭಾಷಣದ ವೇಳೆ ಪದೇಪದೇ ಇಂಟರ್‌ನೆಟ್ ಕೈಕೊಟ್ಟು, ಅರ್ಧದಷ್ಟು ಭಾಷಣವನ್ನು ನೆರೆದಿದ್ದವರು ಕೇಳಲು ಸಾಧ್ಯವಾಗಿಲ್ಲ.

ಆರೋಗ್ಯವಂತ ಜೀವನ ಸಾಗಿಸಬೇಕಾದರೆ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಸರ್ಕಾರಗಳು ಕೊಡಬೇಕಾಗುತ್ತದೆ. ಕಳೆದ 10 ವರ್ಷದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ತಂದಿದ್ದೇವೆ, ಭವ್ಯ ಭಾರತ ನಿರ್ಮಾಣ ಮಾಡಬೇಕಾದರೆ ಇಂಥ ಕಾರ್ಯಕ್ರಮಗಳ ಅವಶ್ಯಕತೆ ಇದೆ, ಮೆಡಿಕಲ್ ವಿಭಾಗವನ್ನು ಇನ್ನಷ್ಟು ಶಕ್ತಿಯುತವಾಗಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತರಲಾಗಿದೆ. ಜೆ.ಪಿ.ನಡ್ಡಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net