

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಕಾಮಗಾರಿ ಪೂರ್ಣಗೊಂಡಿರುವ ಇಎಸ್ಐ ಆಸ್ಪತ್ರೆಯನ್ನು ಮುಂದಿನ 2 ತಿಂಗಳಲ್ಲಿ ಉದ್ಘಾಟನೆ ಮಾಡದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಿಪಿಐಎಂ ಜಿಲ್ಲಾ ಮುಖಂಡ ಪಿ.ಎ.ವೆಂಕಟೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದ (ಸಿಪಿಐಎಂ) ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 9ನೇ ತಾಲೂಕು ಸಮ್ಮೇಳನ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಬಂಡವಾಳಶಾಹಿ ರಾಜಕೀಯ ಪಕ್ಷಗಳು ಜನರ ಪರವಾಗಿಲ್ಲ. ಜನರನ್ನು ಮತದ ಯಂತ್ರವಾಗಿ ನೋಡುತ್ತಿದ್ದಾರೆ. ಅವರಿಗೆ ಮತ ಬೇಕು, ಸಮಸ್ಯೆಗಳಿಗೆ ಪರಿಹಾರ ಬೇಕಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಲಂಚವಿಲ್ಲದೆ ತಾಲೂಕು ಕಚೇರಿ, ಕಂದಾಯ ಇಲಾಖೆ, ಪಂಚಾಯಿತಿಗಳಲ್ಲಿ ಕೆಲಸ ಆಗುತ್ತೆ ಎಂದರೆ ನಗಬೇಕಾದ ವಾತಾವರಣ ನಿರ್ಮಾಣವಾಗಿದೆ. ಇ-ಖಾತೆ ಮಾಡಿಸಲು ಗ್ರಾಮ ಪಂಚಾಯಿತಿಯಲ್ಲಿ 20 ಸಾವಿರ, ನಗರಸಭೆಯಲ್ಲಿ 40 ಸಾವಿರ ರೂಪಾಯಿ ಕೊಡಬೇಕು ಎಂಬ ಪರಿಸ್ಥಿತಿ ಇದೆ.
ಸಿಪಿಐಎಂ ಪಕ್ಷ ಜನರ ಮುಂದೆ ಹೋದರೆ ವೋಟಿಗೆ ಎಷ್ಟು ಕೊಡ್ತೀರಿ ಎಂದು ಕೇಳುವ ಪರಿಸ್ಥಿತಿಯನ್ನು ಈ ಮೂರೂ ಬಂಡವಾಳಶಾಹಿ ಪಕ್ಷಗಳು ನಿರ್ಮಾಣ ಮಾಡಿವೆ. ನಗರದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ರೇಷನ್ ಕಾರ್ಡ್ ರದ್ದಾಗಿವೆ. ಈ ಸಮಸ್ಯೆಗಳು ಜನಪ್ರತಿನಿಧಿಗಳಿಗೆ ಬೇಕಿಲ್ಲ. ಚುನಾವಣೆ ಸಂದರ್ಭದಲ್ಲಿ ಹಣ ಖರ್ಚು ಮಾಡಿ, ಅದನ್ನು ಮತ್ತೆ ಸುಲಿಗೆ ಮಾಡ್ತಾರೆ ಎಂದು ದೂರಿದರು.
ಇದು ಕಾರ್ಮಿಕ ವಿರೋಧಿ ಸರ್ಕಾರದ ಜನಪರ ಕೆಲಸ!: ಇಡೀ ರಾಜ್ಯದಲ್ಲೇ ಅತಿಹೆಚ್ಚು ನೇಕಾರರು ತಾಲೂಕಿನಲ್ಲಿ ಇದ್ದಾರೆ. ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ 19 ಬಗೆಯ ಸೌಲಭ್ಯಗಳನ್ನು ನೇಕಾರರಿಗೂ ಕೊಡಬೇಕು ಎಂದು ಹೋರಾಡಿದ ಫಲವಾಗಿ ಸರ್ಕಾರ ನೇಕಾರರಿಗೆ 5 ಸಾವಿರ ಕೊಡುತ್ತಿದೆ ಎಂದು ಜಿಲ್ಲಾ ಮುಖಂಡ ಪಿ.ಎ.ವೆಂಕಟೇಶ್ ಎಂದರು. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 50 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕಾರ್ಮಿಕರ ಪರವಾಗಿದ್ದ 29 ಕಾಯ್ದೆಗಳನ್ನು 4 ಕೋಡ್ಗಳಾಗಿ ರೂಪಾಂತರಗೊಳಿಸಿ, ಮಾಲೀಕರ ಪರವಾದ ಕೋಡ್ ಆಗಿ ಬದಲಾಯಿಸಿದ್ದಾರೆ. ಕಾರ್ಮಿಕರನ್ನು ಯಾವುದೇ ಸಂದರ್ಭದಲ್ಲಿ ಮಾಲೀಕ ಬಳಸಿ ಬಿಸಾಡಬಹುದು. 12 ಗಂಟೆ ಕೆಲಸ, ಪಿಎಫ್, ಇಎಸ್ಐ ಬಗ್ಗೆ ಕಾರ್ಮಿಕನ ಮೇಲೆ ನಡೆಯುವ ಶೋಷಣೆ ದಬ್ಬಾಳಿಕೆಯ ಬಗ್ಗೆ ಪ್ರಶ್ನೆ ಮಾಡಿದರೆ ಒಂದು ನೋಟಿಸ್ ನೀಡದೆ ಕಿತ್ತು ಹಾಕಬಹುದಾಗಿದೆ. ಇದು ಕಾರ್ಮಿಕ ವಿರೋಧಿ ಸರ್ಕಾರದ ಜನಪರ ಕೆಲಸ ಎಂದು ವ್ಯಂಗ್ಯವಾಡಿದರು.
ಕಾಮಗಾರಿ ಮುಗಿದು 2 ವರ್ಷ: ಹನ್ನೊಂದು ವರ್ಷಗಳ ಹಿಂದೆ ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಬಂದು ಇಎಸ್ಐ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಿ 2 ವರ್ಷದಲ್ಲಿ ಉದ್ಘಾಟನೆ ಮಾಡ್ತೀವಿ ಅಂದರು. ಆದರೆ, ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡು 2 ವರ್ಷಗಳು ಕಳೆದಿವೆ. ರಾಜಕೀಯ ಕಾರಣದಿಂದ ಉದ್ಘಾಟನೆಗೊಳ್ಳದೆ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ಪಾಳು ಬೀಳುತ್ತಿದೆ. ಮುಂದಿನ 2 ತಿಂಗಳಲ್ಲಿ ಉದ್ಘಾಟನೆ ಮಾಡದೆ ಇದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಮುಖಂಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಚುನಾವಣಾ ಸಂದರ್ಭದಲ್ಲಿ ರೈತರು ಮತ್ತು ನೇಕಾರರ ಮೂಗಿಗೆ ರಾಜಕಾರಣಿಗಳು ತುಪ್ಪ ಸವರುತ್ತಾರೆ. ರಾಜ್ಯದಲ್ಲಿ 51 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರದಲ್ಲೂ ಒಬ್ಬರು ನೇಣು ಬಿಗಿದುಕೊಂಡರು. ಟೆಕ್ಸ್ಟೈಲ್ ನೀತಿ ಬಂಡವಾಳಶಾಹಿಗಳ ಪರವಾಗಿ ತರುತ್ತಾರೆ. ಈ ನೇಕಾರ ವಿರೋಧಿ ನೀತಿಗಳಿಂದ ಸಾಲ ತೀರಿಸಲಾಗದೆ ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ. ಪಿ.ಎ.ವೆಂಕಟೇಶ್ ಜಿಲ್ಲಾ ಮುಖಂಡ