

ಕುಶಾಲನಗರ: ಇಂಧನ ಮತ್ತು ವಿದ್ಯುಚ್ಛಕ್ತಿಯನ್ನು ಅಪವ್ಯಯ ಮಾಡದೆ ಭವಿಷ್ಯತ್ತಿನ ದೃಷ್ಟಿಯಿಂದ ಮಿತವಾಗಿ ಬಳಕೆ ಮಾಡಬೇಕು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‌ಇಡಿಎಲ್) ಉಪ ಪ್ರಧಾನ ವ್ಯವಸ್ಥಾಪಕ ಸಿ.ಟಿ.ಮಂಜುನಾಥ್ ಸಲಹೆ ನೀಡಿದರು.
ಕೆಆರ್‌ಇಡಿಎಲ್ ವತಿಯಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನವೀಕರಿಸಬಹುದಾದ ಇಂಧನ ಸಂರಕ್ಷಣೆ ಕುರಿತು ಶುಕ್ರವಾರ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಅತಿಯಾದ ಆಸೆ, ಏರುತ್ತಿರುವ ಜನಸಂಖ್ಯೆ, ವೈಭವದ ಜೀವನದ ಬಯಕೆಗಳು ಪರಿಸರವನ್ನು ಹಾಳು ಮಾಡುತ್ತಿವೆ. ಇದು ಹೀಗೆಉ ಮುಂದುವರಿದಲ್ಲಿ ಭವಿಷ್ಯತ್ತಿನಲ್ಲಿ ಇಂಧನ ಮೂಲಗಳ ಕೊರತೆಯುಂಟಾಗಿ ಪರಿತಪಿಸಬೇಕಾಗುತ್ತದೆ ಎಂದರು.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಸೀನಪ್ಪ ಮಾತನಾಡಿ, ನವೀಕರಿಸಬಹುದಾದ ಇಂಧನ ಸಂರಕ್ಷಣೆಗೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದರೊಂದಿಗೆ ಅವುಗಳ ಸಂರಕ್ಷಣೆಗೆ ಪಣತೊಡಬೇಕಾಗಿದೆ. ಇಂಧನವನ್ನು ಉತ್ಪಾದನೆಗಿಂತ ಹೆಚ್ಚು ಖರ್ಚು ಮಾಡುತ್ತೇವೆ. ಆದ್ದರಿಂದ, ಮೂಲಗಳನ್ನು ಮಿತವಾಗಿ ಬಳಕೆ ಮಾಡಬೇಕು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ದಿನನಿತ್ಯದ ಚಟುವಟಿಕೆಗಳಲ್ಲಿ ಇಂಧನ ಮತ್ತು ವಿದ್ಯುಚ್ಛಕ್ತಿಯನ್ನು ಅಪವ್ಯಯ ಮಾಡದೆ ಮುಂದಿನ ಭವಿಷ್ಯಕ್ಕಾಗಿ ಸಂರಕ್ಷಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಕಾರ್ಯಕ್ರಮ ಸಂಯೋಜಕ ಡಾ.ಚೂಡಾ ರತ್ನಾಕರ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಎಂ.ಶ್ರೀನಿವಾಸಮೂರ್ತಿ, ಡಾ.ಪಿ.ಸಿ.ಶ್ರೀನಿವಾಸ್, ಡಾ.ವಿ.ಜಿ.ವಾಣಿ, ಸೆಸ್ಕ್ ಇಂಜಿನಿಯರ್ ಲವಕುಮಾರ್, ನೀತಾ ಇತರರು ಇದ್ದರು.