ಇಂಧನ ಮೇಲಿನ ಅವಲಂಬನೆ ಹೆಚ್ಚಳ, ವಿದ್ಯುತ್ ಮಹೋತ್ಸವ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

h30-Hescom 1
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಆಧುನಿಕ ಜಗತ್ತು ಪ್ರತಿಯೊಂದು ಕೆಲಸಕ್ಕೂ ವಿದ್ಯುತ್​ಅನ್ನು ಅವಲಂಬಿಸಿದೆ. 2040ರ ವೇಳೆಗೆ ಭಾರತದ ವಿದ್ಯುತ್ ಬೇಡಿಕೆ ಈಗಿನ ಎರಡು ಪಟ್ಟು ಆಗಲಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ತರಬೇಕಾಗಿದೆ. ಕೆಲಸದ ಕಾರ್ಯವೈಖರಿ ಉತ್ತಮಗೊಳ್ಳಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಶನಿವಾರ ಉಜ್ವಲ ಭಾರತ ಉಜ್ವಲ ಭವಿಷ್ಯ ಪವರ್ 2047 ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇಂಧನ ಇಲಾಖೆ, ವಿದ್ಯುತ್ ಸಚಿವಾಲಯ, ಎನ್​ಟಿಪಿಸಿ, ಜಿಲ್ಲಾಡಳಿತ, ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಸಹಯೋಗದಲ್ಲಿ ಏರ್ಪಡಿಸಿದ್ದ ವಿದ್ಯುತ್ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ತಲಾ ವಿದ್ಯುತ್ ಬಳಕೆ ಒಂದು ತಾಸಿಗೆ 2,674 ಕಿಲೋ ವ್ಯಾಟ್ ಇದ್ದರೆ, ಭಾರತದಲ್ಲಿ ಇದರ ಪ್ರಮಾಣ 1,181 ಕಿಲೋ ವ್ಯಾಟ್ ಇದೆ. ಕೋವಿಡ್ ಸಾಂಕ್ರಾಮಿಕದ ನಂತರ ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೆಸರು ಪಡೆದಿದೆ. ಇದಕ್ಕೆ ಪೂರಕವಾಗಿ 24 ತಾಸು ಗುಣಮಟ್ಟದ ವಿದ್ಯುತ್ ನೀಡಬೇಕಾಗಿದೆ. ಬದಲಾವಣೆಗೆ ಎಲ್ಲರೂ ತೆರೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಕರ್ನಾಟಕವು ವಿದ್ಯುತ್ ಉತ್ಪಾದನೆಯಲ್ಲಿ ಸಮರ್ಥವಾಗಿದೆ. ಇನ್ನಷ್ಟು ಸಮರ್ಪಕತೆ ಬರಬೇಕಾಗಿದೆ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಬೇರೆ ಎಸ್ಕಾಂಗಳಿಗೆ ಹೋಲಿಸಿದರೆ ಹೆಸ್ಕಾಂ ಉತ್ತಮ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೌರವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು. ರೈತರ ಪಂಪ್​ಸೆಟ್​ಗಳಿಗೆ ಹಗಲು ಏಳು ತಾಸು ನೀಡುವ ವಿದ್ಯುತ್​ಅನ್ನು ಕಡಿಮೆ ಮಾಡಬಾರದು. ಸರಿಯಾದ ವೇಳಾ ಪಟ್ಟಿ ನಿರ್ವಹಣೆ ಮಾಡಿ ವಿದ್ಯುತ್ ಪೂರೈಸಿದರೆ ರೈತರಿಗೂ ಅನುಕೂಲ. ವಿದ್ಯುತ್ ಅದಾಲತ್ ನಡೆಸಿದ ನಂತರ ಅದರ ಪ್ರಗತಿ ಬಗ್ಗೆ ಪರಿಶೀಲನೆ ಮಾಡಬೇಕು. 24 ಗಂಟೆಯಲ್ಲಿ ಟಿಸಿ ಬದಲಾವಣೆ ಮಾಡಿಕೊಡುವ ಭರವಸೆ ಸರಿಯಾಗಿ ಜಾರಿಯಾಗಬೇಕು ಎಂದು ಸಲಹೆ ನೀಡಿದರು.

ಮಹಾಪೌರ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಮೀನಾಕ್ಷಿ ಒಂಟಮೂರಿ, ಶಿವು ಮೆಣಸಿನಕಾಯಿ, ಹೆಸ್ಕಾಂ ಅಧಿಕಾರಿಗಳಾದ ರಮೇಶ ಬೆಂಡಿಗೇರಿ, ವಿನಾಯಕ ಪಾಲನಕರ, ಎನ್​ಟಿಪಿಸಿಯ ವಿಜಯಕೃಷ್ಣ ಪಾಂಡೆ, ಕೆಪಿಟಿಸಿಎಲ್​ನ ವೀರೇಶಕುಮಾರ ಹೆಬ್ಬಾಳ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net