

ಹಾಸನ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜೆಡಿಎಸ್ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಹೇಮಾವತಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬರಗಾಲದ ಸಂಕಷ್ಟದಿಂದ ಜಿಲ್ಲೆ ಹಾಗೂ ರಾಜ್ಯದ ಜನಸಾಮಾನ್ಯರು, ರೈತರು ಹೊರಬರಲಾಗದೆ ತೊಂದರೆಪಡುತ್ತಿರುವಾಗಲೇ ಇಂಧನ ದರ ಹೆಚ್ಚಳ ಮಾಡಿರುವುದನ್ನು ಜೆಡಿಎಸ್ ಪಕ್ಷ ಉಗ್ರವಾಗಿ ಖಂಡಿಸುತ್ತವೆ ಎಂದು ಹೇಳಿದರು.
ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಕಾಂಗ್ರೆಸ್ ಜನರ ಪರ, ಬಡವರ ಪರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ನೀವು ಈಗ ಅದೇ ಶ್ರೀ ಸಾಮಾನ್ಯನ ಬದುಕಿಗೆ ಬೆಲೆ ಏರಿಕೆ ಮೂಲಕ ಸಂಕಷ್ಟ ತಂದೊಡ್ಡಿರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರದ ಜತೆಗೆ ಚುನಾವಣೆ ಗೆಲ್ಲಲೇಬೇಕು ಎಂಬ ಒಂದೇ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿಗೆ ತಂದ ನೀವು, ಅವುಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿರುವುದು ದುರದೃಷ್ಟಕರ. ಇದೇನಾ ನೀವು ದೇಶಕ್ಕೆ ನೀಡಿರುವ ಕರ್ನಾಟಕದ ಮಾಡೆಲ್ ಎಂದು ನಾಡಿನ ಜನರ ಪರವಾಗಿ ನಮ್ಮ ಪಕ್ಷ ಪ್ರಶ್ನಿಸಲು ಬಯಸುತ್ತದೆ ಎಂದರು.
ನಿಮ್ಮದೇ ಸಂಪುಟದ ಹಲವು ಸಚಿವರು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕಾಗಿಯೇ ಇಂಧನದ ಮೇಲಿನ ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನು ನೋಡಿದರೆ ಪೂರ್ವಾಪರ ಯೋಚಿಸದೇ, ಸಂಪನ್ಮೂಲ ಕ್ರೂಢೀಕರಣ ಮಾಡಿಕೊಳ್ಳದೆ ನೀವು ಗ್ಯಾರಂಟಿ ಯೋಜನೆಗಳನ್ನು ಏಕೆ ಘೋಷಣೆ ಮಾಡಿದ್ದೀರಿ ಎಂದು ಇದರಿಂದ ತಿಳಿದು ಬರುತ್ತದೆ. ಬೆಲೆ ಏರಿಕೆ ನಂತರವೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಇಂಧನ ದರ ಕಡಿಮೆ ಇದು ಎಂದು ಸಮರ್ಥಿಸಿಕೊಳ್ಳುತ್ತಿರುವ ನಿಮ್ಮ ನಿಲುವು ಹಾಸ್ಯಾಸ್ಪದ ಎಂದು ಹೇಳಿದರು.
ಪೆಟ್ರೋಲ್-ಡೀಸೆಲ್ ಮೇಲಿನ ಬೆಲೆ ಏರಿಕೆಯಿಂದ ಸಾಗಣೆ ವೆಚ್ಚ ಹಾಗೂ ಅಗತ್ಯ ವಸ್ತುಗಳ ಬೆಲೆ ಸಹಜವಾಗಿಯೇ ಏರಲಿದೆ. ಇದರಿಂದ ಜನ ಸಾಮಾನ್ಯರ ಜೀವನದ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಹಿಂದೆಲ್ಲಾ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿ ಬಡ ಜನರ ಜೀವ-ಜೀವನದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ನೀವು, ಈಗ ಮಾಡಿರುವುದೇನು ಎಂಬುದನ್ನು ನಾಡಿನ ಜನರಿಗೆ ಉತ್ತರಿಸಬೇಕಿದೆ ಎಂದು ಆಗ್ರಹಿಸಿದರು.
ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಮೊದಲೇ ಬರದ ಪೆಟ್ಟಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ನಿಮ್ಮ ಸರ್ಕಾರ ಅಭಿವೃದ್ಧಿಯನ್ನೇ ಸಂಪೂರ್ಣವಾಗಿ ಮರೆತಿದೆ. ಸಮಸ್ತ ಜನರ ಪರವಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ, ಅದೇ ಜನರ ಮೇಲೆ ತೆರಿಗೆಯ ಭಾರ ಹೊರಿಸುವುದು ನಿಜಕ್ಕೂ ಖಂಡನೀಯ. ಕೂಡಲೇ ಇಂಧನದ ಮೇಲಿನ ತೆರಿಗೆ ಏರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಅಲ್ಲದೆ ಬರುವ ಅಧಿವೇಶನದಲ್ಲಿಯೂ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಈ ಮೂಲಕ ತಮಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.
ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಐದು ಗ್ಯಾರಂಟಿ ನೀಡಿತು. ಅವರಿಗೆ ಬೇಕಿದ್ದು ಅಧಿಕಾರ. ಈಗ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ. ಬಸ್ ಪ್ರಯಾಣದಲ್ಲಿ ಹೊಸ ಬಸ್‌ಗಳನ್ನು ಖರೀದಿಸಿಲ್ಲ. ಇದರಿಂದ ಪ್ರಯಾಣಿಕರು ರೋಸಿಹೋಗಿದ್ದಾರೆ. ಸರಿಯಾಗಿ ಕರೆಂಟ್ ಕೂಡ ನೀಡುತ್ತಿಲ್ಲ. ಮಹಿಳೆಯರಿಗೆ 2 ಸಾವಿರ ಹಣ ಬಂದಿಲ್ಲ. ಟಿ.ಸಿ.ಗೆ ರೈತರು ಹಣ ಕಟ್ಟಿ ವರ್ಷಗಳಿಂದ ಕಾಯುತ್ತಿದ್ದಾರೆ. ಸ್ಟ್ಯಾಂಪ್ ಡ್ಯುಟಿ ದರ, ಮದ್ಯದ ದರ ಹೆಚ್ಚಿಸಿದ್ದಾರೆ. ಇದೀಗ ಇಂಧನ ದರ ಹೆಚ್ಚಿಸಿದ್ದಾರೆ ಎಂದು ಆರೋಪಿಸಿದರು.
ಇದು ಸಂಪೂರ್ಣ ಜನ ವಿರೋಧಿ ಸರ್ಕಾರ. ಹಣಕಾಸು ವ್ಯವಸ್ಥೆ ಬಿದ್ದು ಹೋಗಿದೆ. ಬದ್ಧತಾ ವೆಚ್ಚ ಭರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇಂಧನ ದರ ಹೆಚ್ಚಳದಿಂದ ದಿನನಿತ್ಯದ ಆಹಾತ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ. ಕೂಡಲೇ ಸರ್ಕಾರ ಇಂಧನ ದರ ಇಳಿಸಬೇಕು. ಇಲ್ಲದಿದ್ದಲ್ಲಿ ಅಧಿಕಾರದಿಂದ ಕೆಳಗೆ ಇಳಿಯಲಿ. ಗೆಲುವಿನ ಮಾನದಂಡಕ್ಕಾಗಿ ಗ್ಯಾರಂಟಿ ನೀಡಬೇಡಿ. ರಾಜ್ಯ ಹಾಗೂ ದೇಶದ ಅಧಃಪತನಕ್ಕೆ ಕಾಂಗ್ರೆಸ್ ಕಾರಣವಾಗಿದೆ. ಅಭಿವೃದ್ಧಿಗೆ ಇವತ್ತು ಯಾವ ಶಾಸಕರಿಗೂ ಹಣ ನೀಡುತ್ತಿಲ್ಲ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಬಿಜೆಪಿ ಸರ್ಕಾರವನ್ನು ಕಮಿಷನ್ ಸರ್ಕಾರ ಅನ್ನುತ್ತೀರಿ. ಇವತ್ತು ಕಾಂಗ್ರೆಸ್ ಸರ್ಕಾರ ಶೇ.55 ಕಮಿಷನ್ ಪಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕೊಲೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ವಕ್ತಾರ ಹೊಂಗೆರೆ ರಘು, ಜಿಪಂ ಮಾಜಿ ಅಧ್ಯಕ್ಷ ಸತ್ಯನಾರಾಯಣ, ತಾಲೂಕು ಜೆಡಿಎಸ್ ಅಧ್ಯಕ್ಷರಾದ ಎಸ್ ದ್ಯಾವೇಗೌಡ, ಮಂಜೇಗೌಡ, ಪರಮ ದೇವರಾಜೇಗೌಡ, ಜಿಲ್ಲಾ ನೌಕರರ ಸಂಘದ ಮಾಜಿ ಗೌರವಾಧ್ಯಕ್ಷ ರುದ್ರಪ್ಪ, ಮೊಸಳೆ ಹೊಸಹಳ್ಳಿ ಚಂದ್ರೇಗೌಡ, ನಗರಸಭೆ ಸದಸ್ಯರಾದ ಚಂದ್ರೇಗೌಡ, ಸೈಯದ್ ಅಕ್ಬರ್, ಯೋಗೇಂದ್ರ ಬಾಬು, ಅಮೀರ್ ಜಾನ್, ಬಟ್ಟೆ ಗೋಪಾಲ್ ಸೇರಿದಂತೆ ಇತರರು ಇದ್ದರು.