

ಹುಬ್ಬಳ್ಳಿ: ಇಂಧನ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ನಗರದಲ್ಲಿ ಸೋಮವಾರ ವಿನೂತನ ಹಾಗೂ ಶಾಂತಿಯುತ ಪ್ರತಿಭಟನೆ ನಡೆಸಿದರು.
ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ನವರು, ಚಕ್ಕಡಿ ಹಾಗೂ ಸೈಕಲ್ ಓಡಿಸಿದರು. ಹಳೆ ಬಸ್ ನಿಲ್ದಾಣದ ಮೂಲಕ ಬಸವ ವನ ತಲುಪಿದರು. ಕೇಂದ್ರ ಹೆಚ್ಚಿಸಿರುವ ಇಂಧನ ದರ ಹಾಗೂ ರಾಜ್ಯ ಸರ್ಕಾರ ವಿಧಿಸುವ ಸೆಸ್ ಜನರ ಜೀವ ತಿನ್ನುತ್ತಿವೆ. ಕೂಡಲೇ ಪೆಟ್ರೋಲ್, ಡೀಸೆಲ್ ದರ ಇಳಿಸಬೇಕು ಎಂದು ಒತ್ತಾಯಿಸಲಾಯಿತು.
ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ, ಅಧ್ಯಕ್ಷ ಅಲ್ತಾಫ ಹಳ್ಳೂರ, ರಾಜ್ಯ ಯುವ ಘಟಕದ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಶಾಕೀರ್ ಸನದಿ, ಶರಣಪ್ಪ ಕೊಟಬಾಗಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿರಲಿಲ್ಲ ಪರಸ್ಪರ ಅಂತರ: ಕರೊನಾ ಸೋಂಕು ಹರಡಲಾರಂಭಿಸಿದೆ. ಪ್ರತಿಭಟನೆ ವೇಳೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪರಸ್ಪರ ಅಂತರ ಕಾಯ್ದುಕೊಳ್ಳಲಿಲ್ಲ. ಮಾಸ್ಕ್ ಧರಿಸಿದವರು ವಿರಳವಿದ್ದರು.