ಇಂಧನ ದರ ಏರಿಕೆ ಖಂಡಿಸಿ ಪ್ರತಿಭಟನೆ

8kdl1
Published on

ಕುಂದಗೋಳ: ಕರೊನಾ ಸೋಂಕು ಹರಡುತ್ತಿರುವುದರಿಂದ ಜನತೆ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಹೆಚ್ಚಳ ಮಾಡಿದ್ದರಿಂದ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕಾಂಗ್ರೆಸ್ ಕಿಸಾನ್ ಜಿಲ್ಲಾಧ್ಯಕ್ಷ ಮುತ್ತು ಶಿವಳ್ಳಿ ಆರೋಪಿಸಿದರು.

ಇಂಧನ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕಿಸಾನ್ ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಾರಿಗೆ ಸಂಸ್ಥೆ ಬಸ್ ಸಂಚಾರ ಸಮರ್ಪಕವಾಗಿ ಇಲ್ಲದ್ದರಿಂದ ಜನರು ಖಾಸಗಿ ವಾಹನ, ದ್ವಿಚಕ್ರ ವಾಹನಗಳಲ್ಲಿ ತೆರಳಿ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳಬೇಕಾಗಿದೆ. ಆದರೆ, ಸರ್ಕಾರ ತೈಲ ದರವನ್ನು ದಿನದಿಂದ ದಿನಕ್ಕೆ ಏರಿಸುತ್ತಿರುವುದರಿಂದ ಸಾಮಾನ್ಯ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೆ, ಇಂಧನ ದರ ಕಡಿಮೆಗೊಳಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಕಿಸಾನ್ ತಾಲೂಕಾಧ್ಯಕ್ಷ ಗಂಗಾಧರ ಪಾಣಿಗಟ್ಟಿ ಮಾತನಾಡಿ, ರಾಜ್ಯ ಸರ್ಕಾರವು ಕರೊನಾ ಕಿಟ್ ಖರೀದಿಯಲ್ಲಿ ಅಕ್ರಮ ಎಸಗುತ್ತಿದೆ ಎಂದು ಆರೋಪಿಸಿದರು. ಮುಖಂಡ ಅರವಿಂದ ಕಟಗಿ, ಜಿ.ಡಿ. ಘೊರ್ಪಡೆ ಮಾತನಾಡಿದರು.

ಈ ವೇಳೆ ಸುರೇಶ ಸವಣೂರ, ಅಪ್ಪಣ್ಣ ಹಿರೇಗೌಡ್ರ, ಬಸವರಾಜ ಶಿರಸಂಗಿ, ಗಿರೀಶ ಮುದಿಗೌಡ್ರ, ಬಸವರಾಜ ರೇವಡೇನವರ, ಮೆಹಬೂಬಅಲಿ ಮತ್ತೇಖಾನವರ, ಸಲೀಂ ಕಡ್ಲಿ, ಇತರರಿದ್ದರು. ಇದಕ್ಕೂ ಮುನ್ನ ಪಟ್ಟಣದ ಗಾಳಿ ಮರೆಮ್ಮದೇವಿ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ತಹಸೀಲ್ದಾರ್ ಬಸವರಾಜ ಮೆಳವಂಕಿ ಅವರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net