ಇಂದ್ರಧನುಷ್ 5.0 ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಡಿಸಿ ಸತ್ಯಭಾಮಾ ಚಾಲನೆ

ಇಂದ್ರಧನುಷ್ 5.0 ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಡಿಸಿ ಸತ್ಯಭಾಮಾ ಚಾಲನೆ
Published on

ಹಾಸನ: ರುಬೆಲ್ಲಾ ಮತ್ತು ದಡಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದಂತೆ ಲಸಿಕೆ ಹಾಕಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಎಂ.ಕೃಷ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಶೇ.91 ರಷ್ಟು ಲಸಿಕೆ ಹಾಕಲಾಗಿದ್ದು, ಉಳಿದ ಶೇ.9 ರಷ್ಟನ್ನು ಲಸಿಕೆ ಹಾಕುವುದರ ಮೂಲಕ ಶೇ.100 ರಷ್ಟು ಗುರಿ ಸಾಧಿಸುವಂತೆ ತಿಳಿಸಿದರು.

ಇಂದ್ರಧನುಷ್ 5.0 ಕಾರ್ಯಕ್ರಮವು ಆಗಸ್ಟ್ 7-12, ಸೆ.11-16 ಹಾಗೂ ಅಕ್ಟೋಬರ್ 9-14 ರವರೆಗೆ ಮೂರು ಹಂತದಲ್ಲಿ ನಡೆಯುತ್ತಿದ್ದು, ಸದರಿ ಲಸಿಕಾ ಕಾರ್ಯಕ್ರಮ ಕುರಿತು ಆರೋಗ್ಯ ಕಾರ್ಯಕರ್ತೆಯವರು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಹರಿವು ಮೂಡಿಸುವಂತೆ ತಿಳಿಸಿದರು.

ರೋಗ ಬರದಂತೆ ಹಾಗೂ ಸಾವು-ನೋವು ಸಂಭವಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಗರ್ಭಿಣಿಯರು ಮುಂಜಾಗ್ರತೆ ವಹಿಸಿ ತಾಯಿ ಕಾರ್ಡ್‌ನಲ್ಲಿ ನಮೂದಿಸಿರುವ ಲಸಿಕೆಗಳನ್ನು ನಿಗದಿತ ಸಮಯಕ್ಕೆ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ ಅವರು ಮಾತನಾಡಿ ಲಸಿಕೆ ನೀಡುವುದರ ಮೂಲಕ ತಡೆಗಟ್ಟಬಹುದಾದ 12 ಮಾರಕ ರೋಗಗಳಿಗೆ ಈ ಲಸಿಕೆ ನೀಡಲಾಗುತ್ತಿದ್ದು, ತಪ್ಪದೆ ಲಸಿಕೆ ಹಾಕಿಸುವುದರ ಎಲ್ಲರೂ ರೋಗ ನಿರ್ಮೂಲನೆಗೆ ಸಹಕರಿಸುವಂತೆ ಮನವಿ ಮಾಡಿದರು.

ನಗರಸಭೆ ಅಧ್ಯಕ್ಷರಾದ ಆರ್.ಮೋಹನ್, ನಗರ ಸಭಾ ಸದಸ್ಯರಾದ ಸೈಯದ್ ಅಕ್ಬರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಆರ್‌ಸಿಎಚ್ ಅಧಿಕಾರಿ ಡಾ.ಚೇತನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಹರೀಶ್, ಕಾರ್ಯಕ್ರಮ ಅನುಷ್ಠಾಧಿಕಾರಿಗಳಾದ ಡಾ. ಶಿವಶಂಕರ್, ಡಾ. ಸಂಧ್ಯಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್,ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯಾಧಿಕಾರಿ ವಿಜಯಕುಮಾರಿ ಮತ್ತಿತರರು ಉಪಸ್ಥಿತರಿದ್ದರು. ಉಪ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಅರುಂಧತಿ ಸ್ವಾಗತಿಸಿದರು, ಮಂಜುಳಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net