ಇಂದೂ ರಸ್ತೆಗಿಳಿಯಲ್ಲ ಕೆಎಸ್‌ಆರ್‌ಟಿಸಿ ಬಸ್

IMG-20201213-WA0047
Published on

ತುಮಕೂರು: ಸರ್ಕಾರಿ ನೌಕರರೆಂದು ಪರಿಗಣಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದೆ.

ಭಾನುವಾರ ಮುಷ್ಕರ ಮುಂದುವರಿದಿದ್ದ ಹಿನ್ನೆಲೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಬೆಳಗ್ಗೆ ಪೊಲೀಸ್ ಬೆಂಗಾವಲಿನಲ್ಲಿ ತುಮಕೂರು ನಗರದಿಂದ ಗುಬ್ಬಿ ಪಟ್ಟಣಕ್ಕೆ ಒಂದು ಬಸ್ ಸಂಚಾರ ಆರಂಭಿಸಲಾಗಿತ್ತಾದರೂ ಪ್ರಯಾಣಿಕರು ಇರಲಿಲ್ಲ. ಬಸ್ ಮುಂದೆ ಪೊಲೀಸ್ ಬೆಂಗಾವಲು ವಾಹನ ಕೂಡ ತೆರಳಿದ್ದು ವಿಶೇಷ ಎನ್ನಿಸಿತ್ತು.

ಜಿಲ್ಲಾ ಕೇಂದ್ರ ತುಮಕೂರಿನಲ್ಲಿ 2 ಡಿಪೋ ಹಾಗೂ ತಿಪಟೂರು, ಶಿರಾ, ಮಧುಗಿರಿ, ಕುಣಿಗಲ್, ತುರುವೇಕೆರೆಗಳಲ್ಲಿ ಭಾನುವಾರ ಹಗಲಿನಲ್ಲಿ ಸೇವೆ ಸ್ಥಗಿತ ಮಾಡಿದ್ದವು. ಭಾನುವಾರ ಸಂಜೆ ಮುಷ್ಕರ ಹಿಂಪಡೆದ ಸುದ್ದಿ ಹೊರಬಿದ್ದ ಕೂಡಲೇ ಬಸ್‌ಗಳು ರಸ್ತೆಗಿಳಿಯುತ್ತವೆ ಎಂದು ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್.ಬಸವರಾಜು ತಿಳಿಸಿದ್ದಾರೆ.

ಆದರೆ, ಸರ್ಕಾರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸಲು ಮುಖಂಡರು ನಿರ್ಧರಿಸಿರುವ ಕಾರಣಕ್ಕೆ ನಾಳೆ ಯಾವುದೇ ಬಸ್ ಓಡಾಟ ಇರುವುದಿಲ್ಲ ಎಂದು ಭಾನುವಾರ ಸಂಜೆಯೇ ಕಾರ್ಮಿಕ ಮುಖಂಡ ಸಂಗಪ್ಪ ‘ವಿಜಯವಾಣಿ’ಗೆ ತಿಳಿಸಿದರು.

ಮುಷ್ಕರದ ಹಿನ್ನೆಲೆಯಲ್ಲಿ ಬೇರೆ ಬೇರೆ ಊರುಗಳಿಗೆ ತೆರಳಲು ಜನರು ಖಾಸಗಿ ಬಸ್‌ಗಳ ಮೊರೆ ಹೋಗಿದ್ದರು, ಬೆಂಗಳೂರು, ಹೊಸದುರ್ಗ ನಡುವೆ ದುಭಾರಿ ಹಣ ನೀಡಿ ಖಾಸಗಿ ಬಸ್‌ಗಳಲ್ಲಿಯೇ ಓಡಾಡಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ : ದಿನಪೂರ್ತಿ ಅಧಿಕಾರಿಗಳ ಸಂಪರ್ಕಕ್ಕೆ ಸಿಗದಿದ್ದ ಸಾರಿಗೆ ಇಲಾಖೆ ನೂರಾರು ಸಿಬ್ಬಂದಿ ಭಾನುವಾರ ಸಂಜೆ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು. ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ೋಷಣೆಗಳನ್ನು ಮೊಳಗಿಸಿದರು.ಪ್ರತಿಭಟನೆ ಆರಂಭವಾಗಿ ಕೆಲ ಗಂಟೆಗಳಲ್ಲಿಯೇ ಮುಷ್ಕರ ವಾಪಸ್ ಪಡೆದ ಸುದ್ದಿ ಹೊರಬಿದ್ದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ ಹೈಡ್ರಾಮ ಸೃಷ್ಟಿಯಾಗಿತ್ತು. ಮಾಧ್ಯಮಗಳ ವರದಿಯಲ್ಲಿ ಅಧಿಕಾರಿಗಳ ಮಾತು ಕೇಳಿ ಮುಷ್ಕರ ಅಂತ್ಯವಾಯಿತು ಎಂದು ಭಾವಿಸಿದ್ದ ನೌಕರರು, ನಂತರ ಕಾರ್ಮಿಕರ ಮುಖಂಡರ ಹೇಳಿಕೆಯಿಂದ ಮುಷ್ಕರ ಮುಂದುವರಿಸಲು ತೀರ್ಮಾನಿಸಿದರು.ಕಾರ್ಮಿಕ ಮುಖಂಡ ಕೆ.ವಿ.ಪುಟ್ಟಯ್ಯ, ರಾಜಶೇಖರ್,ಸಂಗಪ್ಪ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net