

ಗುಂಡ್ಲುಪೇಟೆ: ತಾಲೂಕಿನ ಹುಲಿಗಿನಮುರಡಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಆ.19ರ ಮೊದಲನೇ ಶ್ರಾವಣ ಶನಿವಾರದಂದು ಶ್ರಾವಣ ಮಾಸದ ರಥೋತ್ಸವ ನಡೆಯಲಿದೆ. ಚಿಕ್ಕತಿರುಪತಿ ಎಂದೇ ಕರೆಯಲಾಗುವ ಇಲ್ಲಿ ಮಕರ ಸಂಕ್ರಾಂತಿಯಂದು ದೊಡ್ಡಜಾತ್ರೆ ನಡೆದರೆ, ಶ್ರಾವಣ ಮಾಸದ ಮೊದಲ ಶನಿವಾರ ಚಿಕ್ಕಜಾತ್ರೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ದೇವಾಲಯಕ್ಕೆ ಸುಣ್ಣ, ಬಣ್ಣ ಬಳಿದು ಶುಚಿಗೊಳಿಸಿ ರಥವನ್ನು ಸಜ್ಜುಗೊಳಿಸಲಾಗಿದೆ. ಬುಧವಾರ ದೇವರಿಗೆ ಅಭಿಷೇಕ, ಅಂಕುರಾರ್ಪಣ, ಗುರುವಾರ ಪ್ರಾತಃಕಾಲ ಧ್ವಜಾರೋಹಣ, ಸಂಜೆ ಭೇರಿ ತಾಡನ, ಯಾಗಶಾಲಾ ಪ್ರವೇಶ, ಶುಕ್ರವಾರ ನಿತ್ಯಾರ್ಚನೆ ಹಾಗೂ ಕಲ್ಯಾಣೋತ್ಸವ ನಡೆಸಲಾಯಿತು. ಶನಿವಾರ ಮಧ್ಯಾಹ್ನ 12 ಗಂಟೆಗೆ ಉತ್ಸವ ಮೂರ್ತಿಗಳನ್ನು ರಥದಲ್ಲಿ ಇಟ್ಟು ದಿವ್ಯ ರಥೋತ್ಸವ ನಡೆಸಲಾಗುತ್ತದೆ. ದೇವಾಲಯಕ್ಕೆ ಬರುವ ಭಕ್ತರು ತಮ್ಮ ವಾಹನಗಳನ್ನು ಬೆಟ್ಟದ ತಪ್ಪಲಿನಲ್ಲಿ ನಿಲ್ಲಿಸಿ ಸಾರಿಗೆ ಬಸ್‌ಗಳಲ್ಲಿ ಬರಲು ಮಾತ್ರ ಅವಕಾಶ ನೀಡಲಾಗಿದೆ ಎಂದು ತೆರಕಣಾಂಬಿ ಪೊಲೀಸರು ತಿಳಿಸಿದ್ದಾರೆ.