ಇಂದು ಸೆಮೀಸ್, ಫೈನಲ್ ಹಣಾಹಣಿ

11 gkp 01
Published on

ಪೊನ್ನಂಪೇಟೆ: ಕ್‌ಗ್ಗಟ್ನಾಡ್ ಫ್ಲೈಯಿಂಗ್ ಎಲ್ಬೋಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಸೆವೆನ್ ಸೈಡ್ ಹಾಕಿ ಟೂರ್ನಿಯಲ್ಲಿ ಕಾಕೋಟುಪರಂಬು, ಕಕ್ಕಬ್ಬೆ ಮಲ್ಮ (ಬಿ), ಕಿರುಗೂರು (ಬಿ) ಹಾಗೂ ಕಕ್ಕಬ್ಬೆ ಮಲ್ಮ (ಬಿ) ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದವು. ಸೋಮವಾರ ಸೆಮಿಫೈನಲ್, ಫೈನಲ್ ಹಣಾಹಣಿ ನಡೆಯಲಿದೆ.
ಭಾನುವಾರ ಜಿಟಿಜಿಟಿ ಮಳೆಯ ನಡುವೆ ಹಾಕಿ ಆಟ ರಂಗೇರಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಕಾಕೋಟುಪರಂಬು ತಂಡವು ಚೌಡ್ಲು ತಂಡವನ್ನು 5-0 ಗೋಲುಗಳಿಂದ ಮಣಿಸಿತು. ಕಾಕೋಟುಪರಂಬು ಆಟಗಾರ ಆರ್ಯನ್ ಉತ್ತಪ್ಪ 2, ಲೆಹರ್, ಧನುಷ್, ಭೀಮಯ್ಯ ತಲಾ ಒಂದೊಂದು ಗೋಲು ಹೊಡೆದರು.


ಕಕ್ಕಬ್ಬೆ ಮಲ್ಮ (ಬಿ) ತಂಡವು ಮೂರ್ನಾಡ್ ತಂಡದ ವಿರುದ್ಧ 4-1 ಗೋಲುಗಳಿಂದ ಗೆದ್ದು ಬೀಗಿತು. ಮಲ್ಮ ತಂಡ ಆಟಗಾರ ಯಶ್ವಂತ್ 3, ಪೊನ್ನಣ್ಣ, ಮೂರ್ನಾಡ್ ತಂಡದ ವಿಪುಲ್ ತಲಾ 1 ಗೋಲು ಹೊಡೆದರು. ಕಿರುಗೂರು (ಬಿ) ತಂಡಕ್ಕೆ ಕಾಕೋಟುಪರಂಬು (ಬ್ಲೂ) ವಿರುದ್ಧ 2-1 ಗೋಲುಗಳ ಜಯ ದೊರೆಯಿತು. ಕಿರುಗೂರು ಆಟಗಾರ ಚೇತನ್ ಸೋಮಣ್ಣ 2, ಕಾಕೋಟುಪರಂಬು ಆಟಗಾರ ವಿಶಾಲ್ 1 ಗೋಲು ದಾಖಲಿಸಿದರು. ಕಕ್ಕಬ್ಬೆ ಮಲ್ಮ (ಬಿ) ತಂಡ ಬಿ. ಶೆಟ್ಟಿಗೇರಿ ವಿರುದ್ಧ 3-1 ಗೋಲುಗಳ ಗೆಲುವು ಪಡೆಯಿತು. ಕಕ್ಕಬ್ಬೆ ಮಲ್ಮ ಆಟಗಾರ ಚಂದನ್ 2, ಕಾರ್ಯಪ್ಪ, ಬಿ. ಶೆಟ್ಟಿಗೇರಿ ಆಟಗಾರ ಚರ್ಮಣ ತಲಾ ಒಂದೊಂದು ಗೋಲು ಬಾರಿಸಿದರು.


ಫಲಿತಾಂಶ: ಕ್ವಾರ್ಟರ್‌ಫೈನಲ್ ಮುನ್ನ ನಡೆದ ಪಂದ್ಯದಲ್ಲಿ ಚೌಡ್ಲು ತಂಡ ಶ್ರೀಮಂಗಲ ತಂಡವನ್ನು 5-1 ಗೋಲುಗಳಿಂದ ಸೋಲಿಸಿತು. ಚೌಡ್ಲು ಆಟಗಾರ ನಾಗೇಶ್ 2, ಪ್ರಸನ್ನ, ಮನೋಜ್, ಶಮಂತ್, ಶ್ರೀಮಂಗಲ ಆಟಗಾರ ಚಂಗಪ್ಪ ತಲಾ ಒಂದೊಂದು ಗೋಲು ಹೊಡೆದರು. ಕಾಕೋಟುಪರಂಬು ತಂಡವು ಕದನೂರ್ ತಂಡವನ್ನು 5-1 ಗೋಲುಗಳಿಂದ ಮಣಿಸಿತು. ಕಾಕೋಟುಪರಂಬು ಆಟಗಾರ ಧನುಶ್ 3, ಲೆಹರ್, ಆರ್ಯನ್, ಕದನೂರು ಆಟಗಾರ ಗಣಪತಿ ತಲಾ 1 ಗೋಲು ಬಾರಿಸಿದರು.


ಕಕ್ಕಬ್ಬೆ ಮಲ್ಮ (ಬಿ) ತಂಡಕ್ಕೆ ನಿಟ್ಟೂರು ವಿರುದ್ಧ 5-0 ಗೋಲುಗಳ ಜಯ ದೊರೆಯಿತು. ಮಲ್ಮ ಆಟಗಾರ ಅಪ್ಪಣ್ಣ 3, ಅಯ್ಯಣ್ಣ, ಪೊನ್ನಣ್ಣ ತಲಾ 1 ಗೋಲು ಬಾರಿಸಿದರು. ಮೂರ್ನಾಡ್ ತಂಡವು ಅಂಜಿಕೇರಿನಾಡ್ ತಂಡವನ್ನು 13-12 ಗೋಲುಗಳಿಂದ ಮಣಿಸಿತು. 2-2 ಟೈ ಸಾಧನೆಯಿಂದ ಶೂಟೌಟ್ ಮೂಲಕ ಮೂರ್ನಾಡ್ ಗೆದ್ದು ಬೀಗಿತು. ಅಂಜಿಕೇರಿ ಆಟಗಾರ ದೀಪಕ್ 2, ಸಜು ಸೋಮಣ್ಣ 1, ಮೂರ್ನಾಡ್ ಆಟಗಾರ ಬೋಪಣ್ಣ 2, ವಿಪುಲ್ 1 ಗೋಲು ಹೊಡೆದು ಮಿಂಚಿದರು.


ಕಿರುಗೂರು (ಬಿ) ತಂಡವು ನಾಲ್ಕೇರಿ ವಿರುದ್ಧ 4-1 ಗೋಲುಗಳ ಜಯ ಸಾಧಿಸಿತು. ಕಿರುಗೂರು ಆಟಗಾರ ಸ್ಪಾನ್ ಅಯ್ಯಪ್ಪ 3, ಚೇತನ ಸೋಮಣ್ಣ, ನಾಲ್ಕೇರಿ ಆಟಗಾರ ಪೂಣಚ್ಚ ತಲಾ ಒಂದೊಂದು ಗೋಲು ಹೊಡೆದರು. ಕಾಕೋಟುಪರಂಬು ಬ್ಲೂ ತಂಡವು ಪೊನ್ನಂಪೇಟೆ ವಾರಿಯರ್ ವಿರುದ್ಧ 2-1 ಗೋಲುಗಳ ಜಯ ಸಾಧಿಸಿತು. ಕಾಕೋಟುಪರಂಬು ಆಟಗಾರ ಟಿ. ಎಸ್. ಸುದೇಶ್, ವಿಶಾಲ್, ಪೊನ್ನಂಪೇಟೆ ಆಟಗಾರ ಹೃತಿಕ್ ತಲಾ 1 ಗೋಲು ಬಾರಿಸಿದರು.


ಕಕ್ಕಬ್ಬೆ (ಬ್ಲೂ ಬಿ) ತಂಡವು ಹುದಿಕೇರಿ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಕಕ್ಕಬ್ಬೆ ಆಟಗಾರ ಚಂದನ್, ಕಾರ್ಯಪ್ಪ, ಹುದಿಕೇರಿ ತಂಡದ ಪೊನ್ನಣ್ಣ ತಲಾ ಒಂದೊಂದು ಗೋಲು ಸಾಧನೆ ಮಾಡಿದರು. ಬಿ.ಶೆಟ್ಟಿಗೇರಿ ತಂಡಕ್ಕೆ ಪೊನ್ನಪ್ಪಸಂತೆ ವಿರುದ್ಧ 3-0 ಗೋಲುಗಳ ಜಯ ದೊರೆಯಿತು. ಬಿ. ಶೆಟ್ಟಿಗೇರಿ ಆಟಗಾರ ಸೋಮಣ್ಣ 2, ಕಾವೇರಪ್ಪ 1 ಗೋಲು ಬಾರಿಸಿದರು.

ಸೋಮವಾರದ ಪಂದ್ಯಗಳು
ಬೆ: 11.00: ಕಕ್ಕಬ್ಬೆ ಮಲ್ಮ (ಎ) - ಕಕ್ಕಬ್ಬೆ ಮಲ್ಮ (ಬಿ)
ಬೆ: 11.45: ಕಿರುಗೂರು (ಬಿ) ಕಾಕೋಟುಪರಂಬು
ಮ: 2.30: ಮೂರನೇ ಸ್ಥಾನದ ಪಂದ್ಯ
ಮ: 3.30: ಅಂತಿಮ ಪಂದ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net