ಇಂದು ಸಿಎಂ ಜತೆಗೆ ಸಚಿವ ಎಚ್‌ಸಿಎಂ ಸಭೆ

15 jan tnp 02
Published on

ತಿ.ನರಸೀಪುರ: ಜಿಲ್ಲಾ ಉಸ್ತುವಾರಿ ಸಚಿವರು ಗುರುವಾರ ಮುಖ್ಯಮಂತ್ರಿಗಳೊಂದಿಗೆ ಸಭೆಯನ್ನು ನಡೆಸಿ ದಕ್ಷಿಣ ಭಾರತದ ಕುಂಭಮೇಳ ನಡೆಯುವ ತ್ರಿವೇಣಿ ಸಂಗಮದಲ್ಲಿನ ಪೂರ್ವಸಿದ್ಧತೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಅಂತಿಮ ರೂಪುರೇಷೆಯನ್ನು ಸಿದ್ಧಪಡಿಸಲಿದ್ದಾರೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ ಮೂರನೇ ಮಹಡಿಯಲ್ಲಿ ಬುಧವಾರ ಸಂಜೆ ಭೂ ದಾಖಲೆಗಳ ಡಿಜೀಟಲೀಕರಣ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ತಿರುಮಕೂಡಲಿನಲ್ಲಿ ಫೆ.10, 11 ಹಾಗೂ 12 ರಂದು 3 ದಿನಗಳ ಕಾಲ ಆಯೋಜನೆಗೊಳ್ಳಲಿರುವ ಕುಂಭಮೇಳಕ್ಕೆ ಸಂಬಂಧಿಸಿದಂತೆ ನಾಳೆಯೇ ಸಿಎಂ ಸಭೆಗೆ ಸಮಯವನ್ನು ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭಾಗಿಯಾಗಿ ಸಿದ್ಧತಾ ಕಾರ್ಯಗಳನ್ನು ಅಂತಿಮಗೊಳಿಸಲಿದ್ದಾರೆ ಎಂದರು.

ತಾಲೂಕು ಕಚೇರಿಯಲ್ಲಿ ಇನ್ಮುಂದೆ ದಾಖಲೆಗಳ ಸುರಕ್ಷತೆಗಾಗಿ ಭೂ ದಾಖಲೆಗಳನ್ನು ಗಣಕೀಕೃತ ಯಂತ್ರದಲ್ಲಿ ದಾಖಲು ಮಾಡಲಾಗಿದ್ದು, ದಾಖಲೆಗಳ ಹುಡುಕಾಟ ನಡೆಸಲು ಕಾಲಾವಕಾಶ ಪಡೆಯಲಾಗುತ್ತಿತ್ತು. ಕೆಲವು ದಾಖಲೆಗಳು ಹಳೆಯದಾದ್ದರಿಂದ ಹುಡುಕಾಟದ ಸಂದರ್ಭದಲ್ಲಿ ಪೇಜ್‌ಗಳು ಹರಿದು ಹೋಗುತ್ತಿದ್ದವು. ಈಗ ದಾಖಲೆಗಳನ್ನು ಗಣಕೀಕೃತಗೊಳಿಸಿರುವುದರಿಂದ ಎಲ್ಲ ದಾಖಲೆಗಳು ಯಥಾವತ್ತಾಗಿ ಸಾರ್ವಜನಿಕರಿಗೆ ಸಿಗಲಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿ, 1930ರ ದಾಖಲಾತಿಗಳನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಲಾಗಿದ್ದು, ತಾಲೂಕಿನ ಸಾರ್ವಜನಿಕರು ತಮಗೆ ಬೇಕಾದ ದಾಖಲೆಗಳನ್ನು ಗಣಕಯಂತ್ರಗಳ ಮೂಲಕ ಪಡೆಯಬಹುದಾಗಿದೆ. ಇದಕ್ಕಾಗಿ ಸಾರ್ವಜನಿಕರು ಅಲೆದಾಡುವುದು ತಪ್ಪಲಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಸದರು ಶಿಥಿಲಗೊಂಡು ಹಾಳಾಗುತ್ತಿರುವ ತಾಲೂಕು ಆಡಳಿತಸೌಧದ ನೆಲ ಅಂತಸ್ತಿನ ಆವರಣವನ್ನು ದುರಸ್ತಿಗೊಳಿಸುವಂತೆ ಸ್ಥಳದಲ್ಲಿಯೇ ಇದ್ದ ಲೋಕೋಪಯೋಗಿ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಎಸ್.ಸತೀಶ್ ಚಂದ್ರನ್ ಅವರಿಗೆ ಸೂಚಿಸಿದರು.

ಭೂ ನ್ಯಾಯಮಂಡಳಿ ಸದಸ್ಯ ಕುಕ್ಕೂರು ಗಣೇಶ್, ತಾ.ಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಮಾಜಿ ಸದಸ್ಯ ರಾಮಲಿಂಗಯ್ಯ, ಬನ್ನೂರು ಪುರಸಭಾ ಮಾಜಿ ಅಧ್ಯಕ್ಷ ಮುನಾವರ್ ಪಾಷ, ನರಸೀಪುರ ಪುರಸಭಾ ಸದಸ್ಯರಾದ ಟಿ.ಎಂ. ನಂಜುಂಡಸ್ವಾಮಿ, ಸಿ.ಪ್ರಕಾಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಎ.ಜೆ.ವೆಂಕಟೇಶ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು, ಸೋಸಲೆ ಪಿಎಸಿಸಿಎಸ್ ಅಧ್ಯಕ್ಷ ಪರಶಿವಮೂರ್ತಿ, ಮುಖಂಡರಾದ ಪಿ.ಸ್ವಾಮಿನಾಥ್‌ಗೌಡ, ಕರಿಯಪ್ಪ, ಶ್ರೀಕಂಠ, ಪುಳ್ಳಾರಿ ಮಾದೇಶ್, ಮಂಜುನಾಥ್, ಕೆಬ್ಬೆ ಶಿವಸ್ವಾಮಿ, ಕಸಬ ಆರ್ ಐ. ಮಹೇಂದ್ರ, ಪುರಸಭಾ ಆರೋಗ್ಯ ಅಧಿಕಾರಿ ಎಂ. ಮಧು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net