ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ

Published on

ಪಿರಿಯಾಪಟ್ಟಣ: ತಾಲೂಕಿನ ವಿವಿಧ ಇಲಾಖೆಗಳ 175ಕ್ಕೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಏ.26ರಂದು ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ.

ಪಟ್ಟಣದ ಬೆಟ್ಟದಪುರ ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಸುಸಜ್ಜಿತ ಜರ್ಮನ್ ಮಾದರಿಯ ಟೆಂಟ್ ನಿರ್ಮಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸುಮಾರು 15 ರಿಂದ 20 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 310 ಅಡಿ ಉದ್ದ ಹಾಗೂ 140 ಅಡಿ ಅಗಲದ ಜರ್ಮನ್ ಟೆಂಟ್‌ನಲ್ಲಿ 36 ಅಡಿ ಉದ್ದ ಮತ್ತು 100 ಅಡಿ ಅಗಲದ ವೇದಿಕೆ ನಿರ್ಮಿಸಲಾಗಿದೆ. ಸಭಾಂಗಣದ ಬಲಬದಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡುವ ಉದ್ದೇಶದಿಂದ ಹಾಗೂ ಸವಲತ್ತುಗಳ ವಿವರ ನೀಡುವ ಸಲುವಾಗಿ ವಿವಿಧ ಇಲಾಖೆಯ ಯೋಜನೆಗಳು ಮತ್ತು ಸವಲತ್ತುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಬ್ಸಿಡಿ ಯೋಜನೆಯಲ್ಲಿ ನೀಡಲಾಗುವ ಸೌಲಭ್ಯಗಳು ಮತ್ತು ಯಂತ್ರೋಪಕರಣಗಳನ್ನು ಪ್ರದರ್ಶನ ಮಾಡಲು ಪ್ರತಿಯೊಂದು ಮಳಿಗೆ 33್ಡ33 ಅಳತೆಯಂತೆ ಒಟ್ಟು 2000 ಅಡಿ ಉದ್ದಗಳಷ್ಟು ಸಾಮಾನ್ಯ ಟೆಂಟ್ ನಿರ್ಮಿಸಲಾಗಿದೆ.

ಸಭಾಂಗಣದ ಎಡಭಾಗದಲ್ಲಿ ಸುಮಾರು 15, 000 ಜನಕ್ಕೆ ಊಟದ ವ್ಯವಸ್ಥೆ, ವಿವಿಐಪಿಗಳಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ.

ಲಸಿಕೆಗೆ ಚಾಲನೆ: ಪಶುಸಂಗೋಪನಾ ಇಲಾಖೆಯಿಂದ ರಾಜ್ಯಾದ್ಯಂತ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ನೀಡಲು ಕಾರ್ಯಕ್ರಮ ರೂಪಿಸಿದ್ದು, ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಇಲಾಖೆ ಅಧಿಕಾರಿಗಳು ಅಗತೈ ಸಿದ್ಧತೆ ಮಾಡಿಕೊಂಡಿದ್ದಾರೆ.

ಹೆಲಿಪ್ಯಾಡ್ ವ್ಯವಸ್ಥೆ: ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಮೈಸೂರಿನಿಂದ ಹೆಲಿಕ್ಯಾಪ್ಟರ್‌ನಲ್ಲಿ ಆಗಮಿಸಲಿದ್ದು ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ.

ಬಂದೋಬಸ್ತ್: ಕ್ರೀಡಾಂಗಣದಲ್ಲಿ ವೇದಿಕೆ ಮತ್ತು ಸಭಾಂಗಣ ಸ್ಥಳದಲ್ಲಿ ಹೆಚ್ಚುವರಿಯಾಗಿ ಒಬ್ಬರು ಎಸ್ಪಿ, ಒಬ್ಬರು ಎಎಸ್ಪಿ, 6 ಜನ ಡಿವೈಎಸ್ಪಿ, 12 ಜನ ಪೊಲೀಸ್ ಇನ್‌ಸ್ಪೆಕ್ಟರ್, 44 ಜನ ಪಿಎಸ್‌ಐ, 57 ಮಂದಿ ಎಎಸ್‌ಐ, ಡಿ.ಆರ್, ಕೆಎಸ್‌ಆರ್‌ಪಿ ಸೇರಿದಂತೆ 500ಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಸಲಾಗಿದೆ.

ವೇದಿಕೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸಲಿದ್ದು, ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಗಣ್ಯರನ್ನು ಸ್ವಾಗತ ಕೋರುವ ಕಟೌಟ್ ಮತ್ತು ಬ್ಯಾನರ್‌ಗಳು ಪಟ್ಟಣದ ಮುಖ್ಯ ರಸ್ತೆ ಎಲ್ಲೆಡೆ ರಾರಾಜಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net