

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ದೇವನಹಳ್ಳಿಯಲ್ಲಿ ಮಾ.3 ರಂದು ಹಮ್ಮಿಕೊಂಡಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದು, ಕಾರ್ಯಕ್ರಮಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ದೇವನಹಳ್ಳಿಯಲ್ಲಿ ಗುರುವಾರ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿ ಮಾತನಾಡಿದರು. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಚಿಕ್ಕಬಳ್ಳಾಪುರ, ಗ್ರಾಮಾಂತರ ಜಿಲ್ಲೆಗಳಿಂದ 30 ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದೆ ಎಂದರು.
ಎಲ್ಲ ಕಡೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಜನರು ಪಕ್ಷವನ್ನು ಭರವಸೆಯಿಂದ ನೋಡುತ್ತಿದ್ದಾರೆ. ಕರೊನಾ ಸಾಂಕ್ರಾಮಿಕ, ಪ್ರವಾಹ ಮೊದಲಾದ ಸವಾಲುಗಳಿದ್ದರೂ ಉತ್ತಮವಾಗಿ ಆಡಳಿತ ನಿರ್ವಹಣೆ ಮಾಡಿದೆ. ದೇಶದ ಆರ್ಥಿಕ ಪ್ರಗತಿ ಶೇ.7 ಇದ್ದರೆ, ಕರ್ನಾಟಕದ ಆರ್ಥಿಕ ಪ್ರಗತಿ ಶೇ.7.9 ಇದೆ. ಆದ್ದರಿಂದ ಜನರು ಪಕ್ಷದ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದರು.
ಅಮಿತ್ ಶಾ ಅವರು ಬಸವಕಲ್ಯಾಣದಿಂದ ನೇರವಾಗಿ ದೇವನಹಳ್ಳಿಗೆ ಆಗಮಿಸಿ, ಆವತಿ ಗ್ರಾಮದ ರಣಭೈರೇಗೌಡರ ಪ್ರತಿಮೆ ಬಳಿ ತೆರಳಿ ಪುಷ್ಪ ನಮನ ಸಲ್ಲಿಸಲಿದ್ದಾರೆ. ಚನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾರೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಸಾಧನೆ ಹಾಗೂ ಭವಿಷ್ಯದ ಗುರಿಗಳ ಬಗ್ಗೆ ತಿಳಿಸಲಾಗುತ್ತದೆ. ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯ ಜನರಿಗೆ ಯಾವ ಲಾಭ, ಪ್ರಗತಿಯಾಗಿದೆ ಎಂದು ಹೇಳಲಾಗುತ್ತದೆ. ಮುಂದೆ ರಾಜ್ಯವನ್ನು ಹೇಗೆ ಕಟ್ಟಬೇಕು ಎಂಬ ಬಗ್ಗೆಯೂ ಕೇಂದ್ರ ಸಚಿವರು, ಮುಖ್ಯಮಂತ್ರಿ ಮಾತನಾಡಲಿದ್ದಾರೆ. ದೇವನಹಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ನಾಲ್ಕನೇ ತಂಡದ ಯಾತ್ರೆಗೆ ಚಾಲನೆ ದೊರೆಯಲಿದೆ ಎಂದರು.
18 ಸಾವಿರ ಆಸನ: ಇಲ್ಲಿಗೆ ಬರುವವರಿಗೆ ಸಾರಿಗೆ, ಆಹಾರ ವ್ಯವಸ್ಥೆ ಮಾಡಲಾಗಿದೆ. 18 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರು, ವಿವಿಧ ಪ್ರಕೋಷ್ಠ, ಮೋರ್ಚಾಗಳ ಪ್ರಮುಖರು ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ಗ್ರಾಮಾಂತರ ಜಿಲ್ಲೆಯ ನಾಲ್ಕು ಕ್ಷೇತ್ರಗಳನ್ನೂ ಗೆಲ್ಲುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ ಎಂದರು. 10 ಜಿಲ್ಲೆಗಳ 56 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಯಲಿದೆ. ದಾವಣಗೆರೆಯಲ್ಲಿ ಕೊನೆಯ ಬೃಹತ್ ಸಮಾವೇಶ ನಡೆಯಲಿದೆ. ಇದು ಐತಿಹಾಸಿಕ ಸಮಾವೇಶವಾಗಲಿದೆ ಎಂದರು. ಸಂಸದ ಮುನಿಸ್ವಾಮಿ, ಮಾಜಿ ಶಾಸಕರಾದ ಜಿ.ಚಂದ್ರಣ್ಣ, ಪಿಳ್ಳಮುನಿಶಾಮಪ್ಪ, ಬಯಾಪ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ್, ರಾಜ್ಯ ಎಸ್‌ಸಿ ಮೋರ್ಚಾ ಖಜಾಂಚಿ ಕೆ.ನಾಗೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎವಿ.ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಸುಂದರೇಶ್, ಜಿಲ್ಲಾ ಮಾಧ್ಯಮ ವಕ್ತಾರ ಎಸ್.ರಮೇಶ್, ಕ್ಷೇತ್ರ ಉಸ್ತುವಾರಿ ಪುಷ್ಪಾ ಶಿವಶಂಕರ್, ದೇಸೂ ನಾಗರಾಜ್ ಇತರರು ಇದ್ದರು.
ಜನರನ್ನು ಸೇರಿಸಲು ಬೇರೆ ಪಕ್ಷಗಳಿಂದ ಆಮಿಷ: ಬಿಜೆಪಿ ರಥಯಾತ್ರೆಯಲ್ಲಿ ಜನರೇ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ಇದೇ ಮುಂದಿನ ಫಲಿತಾಂಶದ ದಿಕ್ಸೂಚಿ. ಬೇರೆ ಪಕ್ಷಗಳು ಜನರನ್ನು ಸೇರಿಸಲು ಆಮಿಷ ಒಡ್ಡುತ್ತಿವೆ. ಅದನ್ನು ಅವರೇ ಹೇಳುತ್ತಿದ್ದಾರೆ. ಆದರೆ ನಾವು ಜಾಸ್ತಿ ಜನರನ್ನು ಕರೆದುಕೊಂಡು ಬರಬೇಡಿ ಎಂದು ಕೋರುತ್ತಿದ್ದೇವೆ ಎಂಮ ಸಚಿವರು ತಿಳಿಸಿದರು. ರಾಜಕಾರಣದ ಕುರುಕ್ಷೇತ್ರದಲ್ಲಿ ಯಾರ ಬಾಯನ್ನು ಯಾರೂ ಕಟ್ಟಿ ಹಾಕುವುದಿಲ್ಲ. ಬಿಜೆಪಿ ಆಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದೆ. ಪ್ರತಿಪಕ್ಷಗಳ ಟೀಕೆಗಳಿಗೆ ಪ್ರತ್ಯುತ್ತರ ನೀಡುತ್ತಿದ್ದೇವೆ. ಮುಂದೆಯೂ ನೀಡುತ್ತೇವೆ ಎಂದರು. ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಯಾರೂ ಮಾಡಲಿಲ್ಲ. ಅದನ್ನು ಬಿಜೆಪಿ ಮಾಡಿದೆ. ಬಸವಣ್ಣನವರ ಗೌರವಾರ್ಥ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ. ಪಕ್ಷಕ್ಕೆ ಎಲ್ಲ ಸಮುದಾಯಗಳ ನಾಯಕರ ಬಗ್ಗೆ ಗೌರವ ಇದೆ. ಜಾತಿ ಓಲೈಕೆ, ಧರ್ಮದ ಓಲೈಕೆ ಮಾಡುವುದು ನಮ್ಮ ಪಕ್ಷದ ಆಶಯ ಅಲ್ಲ ಎಂದು ಹೇಳಿದರು.