ಇಂದು ಬಿಳಿಗಿರಿರಂಗನಾಥಸ್ವಾಮಿ ಚಿಕ್ಕಜಾತ್ರೆ

15 yelandur 01
ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇಗುಲ
Published on

ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಶ್ರೀ ಬಿಳಿಗಿರಂಗನಾಥಸ್ವಾಮಿ ರಥೋತ್ಸವ (ಚಿಕ್ಕಜಾತ್ರೆ) ಜ. 16ರಂದು ನಡೆಯಲಿದೆ.

ತಾಲೂಕು ಕೇಂದ್ರದಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಬೆಟ್ಟವನ್ನು ದಕ್ಷಿಣ ತಿರುಪತಿ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿ ಪ್ರತಿ ಸಂಕ್ರಾಂತಿ ಹಬ್ಬದ ಮಾರನೇ ದಿನ ನಡೆಯುವ ಜಾತ್ರೆಗೆ ಚಿಕ್ಕಜಾತ್ರೆ ಎಂದು ಕರೆಯಲಾಗುತ್ತದೆ. ಹಲವು ಇತಿಹಾಸ ಹೊಂದಿರುವ ಬಿಳಿಗಿರಿರಂಗಸ್ವಾಮಿ ಹಾಗೂ ಅಲಮೇಲಮ್ಮ ಅವರು ಈ ಭಾಗದ ಭಕ್ತರು ಹಾಗೂ ಸೋಲಿಗರ ಆರಾಧ್ಯದೈವ ಎಂಬುದು ವಿಶೇಷವಾಗಿದೆ.
ಸೋಮವಾರ ಬೆಳಗ್ಗೆ 10.46 ರಿಂದ 10.57ಕ್ಕೆ ಸಲ್ಲುವ ಶುಭ ಮೀನಾ ಲಗ್ನದ ಕನ್ಯಾಬುಧ ನವಾಂಶದ ಶುಭ ಮಹೋತ್ಸವದಲ್ಲಿ ಚಿಕ್ಕಜಾತ್ರೆ ನಡೆಯಲಿದೆ. ಇದಕ್ಕಾಗಿ ಭಾನುವಾರ ಪಟ್ಟಣದ ಉಪಖಜಾನೆಯಿಂದ ದೇವರಿಗೆ ಧರಿಸುವ ಚಿನ್ನಾಭರಣವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪೊಲೀಸ್ ಬಿಗಿ ಭದ್ರತೆಯಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು.

ಕಳೆದ ಬಾರಿ ಏಪ್ರಿಲ್‌ನಲ್ಲಿ ನಡೆದ ಬಿಳಿಗಿರಿರಂಗನಾಥಸ್ವಾಮಿ ದೊಡ್ಡ ಜಾತ್ರೆಯಲ್ಲಿ ಖಾಸಗಿ ವಾಹನಗಳನ್ನು ನಿಷೇಧ ಮಾಡಿ, ಗುಂಬಳ್ಳಿ ಚೆಕ್‌ಪೋಸ್ಟ್‌ನಿಂದ ಸಾರಿಗೆ ಬಸ್‌ಗಳು ಮಾತ್ರ ಸಂಚರಿಸಬೇಕೆಂದು ಆದೇಶಿಸಲಾಗಿತ್ತು. ಈ ವೇಳೆ ಬಸ್‌ಗಳು ಸಂಚರಿಸಲು ತೊಂದರೆಯಾಗಿ ಅಸ್ತವ್ಯಸ್ತವಾಗಿತ್ತು. ಇದರಿಂದ ಭಕ್ತರು ಬೆಟ್ಟಕ್ಕೆ ತರಳಲು ಪರದಾಡಿದ್ದರು. ಈ ಬಾರಿಯ ಚಿಕ್ಕ ಜಾತ್ರೆಯಲ್ಲೂ ದ್ವಿಚಕ್ರ ವಾಹನಗಳ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಬಸ್‌ಗಳನ್ನು ಸಮಪರ್ಕವಾಗಿ ಯಳಂದೂರು, ಗುಂಬಳ್ಳಿ ಚೆಕ್‌ಪೋಸ್ಟ್, ಚಾಮರಾಜನಗರ, ಕೊಳ್ಳೇಗಾಲ, ಸಂತೇಮರಹಳ್ಳಿ, ನಂಜನಗೂಡು ಸೇರಿದಂತೆ ಇತರ ಸ್ಥಳಗಳಿಂದ ಹೆಚ್ಚು ಸಂಚರಿಸುವ ವ್ಯವಸ್ಥೆ ಮಾಡದಿದ್ದರೆ ಮತ್ತೆ ಸಂಚಾರದಲ್ಲಿ ತೊಂದರೆಯಾಗಲಿದೆ. ಈ ಹಿನ್ನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜಾತ್ರಾ ಮಹೋತ್ಸವಕ್ಕೆ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ಭಕ್ತರ ಅನುಕೂಲಕ್ಕೆ 100 ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಿದ್ದು, ಬೆಟ್ಟದಲ್ಲಿ ಸುಗಮ ಸಂಚಾರಕ್ಕೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಟ್ಯಾಂಕರ್‌ಗಳ ಮೂಲಕ ಭಕ್ತರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ತಾತ್ಕಾಲಿಕವಾಗಿ 20 ಶೌಚಗೃಹಗಳನ್ನು ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net