

ಗೋಕಾಕ, ಬೆಳಗಾವಿ: ಬಿಜೆಪಿ ಸರ್ಕಾರದ 3 ವರ್ಷಗಳ ಸಾಧನೆಗಳನ್ನು ಜನರ ಮುಂದಿಡುವ ಜನಸ್ಪಂದನ ಕಾರ್ಯಕ್ರಮಕ್ಕೆ ಕರದಂಟು ನಗರಿ ಗೋಕಾಕ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಮೈದಾನದಲ್ಲಿ ಸೆ. 28ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಬಿಜೆಪಿ ಜನಸ್ಪಂದನೆ ಕಾರ್ಯಕ್ರಮಕ್ಕೆ ಭವ್ಯ ವೇದಿಕೆ ಸಿದ್ಧಗೊಂಡಿದೆ. 2023ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಹಾಗೂ ಪಕ್ಷವನ್ನು ಅಣಿಗೊಳಿಸುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ನೇತೃತ್ವದಲ್ಲಿ ಶಾಸಕ ರಮೇಶ ಜಾರಕಿಹೊಳಿ ಮುಂದಾಳತ್ವದಲ್ಲಿ ರಾಜ್ಯದ ಘಟನಾನುಘಟಿ ನಾಯಕರು ಆಗಮಿಸುತ್ತಿದ್ದಾರೆ. ಕಳೆದೊಂದು ವಾರದಿಂದ ಪರಿಶೀಲಿಸುತ್ತಿರುವ ಶಾಸಕ ರಮೇಶ ಜಾರಕಿಹೊಳಿ ಯಾವುದೇ ಅಡಚಣೆ ಆಗದಂತೆ ಕಾರ್ಯಕ್ರಮ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ತಮ್ಮದೇ ಆದ ಬೆಂಬಲಿಗರ ತಂಡ ಕಟ್ಟಿಕೊಂಡು ಬಿಜೆಪಿ ಕಾರ್ಯಕ್ರಮಕ್ಕೆ ಅಗತ್ಯ ಇರುವ ಎಲ್ಲ ಸೌಕರ್ಯ ಒದಗಿಸುತ್ತಿದ್ದಾರೆ.
ನಗರದ ಎಲ್ಲ ಬೀದಿಗಳಲ್ಲಿಯೂ ಬಿಜೆಪಿ ಬ್ಯಾನರ್, ಫ್ಲೆಕ್ಸ್, ಧ್ವಜಗಳು, ರಾಜ್ಯದ ನಾಯಕರನ್ನು ಸ್ವಾಗತಿಸಲು ರಾರಾಜಿಸುತ್ತಿವೆ. ಇಡೀ ನಗರ ಕೇಸರಿಮಯವಾಗಿದೆ.
ನ್ಯೂ ಇಂಗ್ಲಿಷ್ ಮೈದಾನದ ಭವ್ಯ ವೇದಿಕೆಯಲ್ಲಿ 10 ಸಾವಿರ ಆಸನ ಅಳವಡಿಸಲಾಗಿದೆ. ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ಗೋಕಾಕ ಸೇರಿ ಜಿಲ್ಲೆಯ ಎಲ್ಲ 18 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಗಳಿಸಲು ಗೋಕಾಕನ ಈ ಜನಸ್ಪಂದನ ಕಾರ್ಯಕ್ರಮ ದಿಕ್ಸೂಚಿಯಾಗಲಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ರಮೇಶ ಜಾರಕಿಹೊಳಿ, ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಜಯ ಪಾಟೀಲ ಸೇರಿ ಎಲ್ಲ ಜನಪ್ರತಿನಿಧಿಗಳು, ರಾಜ್ಯದ ನಾಯಕರು, ಬಿಜೆಪಿ ಜಿಲ್ಲಾ, ತಾಲೂಕು ಸೇರಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವಧಿಯ ಎರಡು ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಅವರ ಒಂದು ವರ್ಷಗಳ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮ ಹಾಗೂ ಪ್ರಮುಖ ನಿರ್ಧಾರ ಜನರ ಮುಂದಿಡುವ ಉದ್ದೇಶ ಹೊಂದಿದೆ. ಜತೆಗೆ ಗೋಕಾಕ ಕ್ಷೇತ್ರದಲ್ಲಿ ಶಾಸಕ ರಮೇಶ ಜಾರಕಿಹೊಳಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಜನರಿಗೆ ತಿಳಿಸುವ ಉದ್ದೇಶ ಹೊಂದಲಾಗಿದೆ.