

ಕೊಳ್ಳೇಗಾಲ: ಕೊಡಗಿನ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ನೂರಾರು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿರುವ ಬುಡಕಟ್ಟು ಜನರಿಗೆ ಸರ್ಕಾರ ನಿವೇಶನ ಮತ್ತು ವಸತಿ ಸೌಕರ್ಯ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಮಾ.7 ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸ್ವರಾಜ್ ಸಂಘಟನೆಯ ಕವಿತಾ ಶಂಕನಪುರ ಹೇಳಿದರು.
ಕೊಡುಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನಲ್ಲಿ ಸುಮಾರು 4700 ಆದಿವಾಸಿ ಕುಟುಂಬಗಳು ಲೈನ್‌ಮನೆಗಳಲ್ಲಿ ವಾಸ ಇವೆ. ಇವರು ವಾಸಿಸುವ ಮನೆಗಳು ಚಿಕ್ಕದಾಗಿದ್ದು, ಬಾಗಿಲು, ಕಿಟಕಿ ಇನ್ನಿತರ ಮೂಲ ಸೌಕರ್ಯ ಇರುವುದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬುಡಕಟ್ಟು ಜನರು ಕಾಫಿ ತೋಟದ ಮಾಲೀಕರ ತೋಟಗಳಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಜೀತ ಪದ್ಧತಿಗೆ ಸಿಕ್ಕಿ ಬಿದ್ದಿರುವ ಈ ಜನರಿಗೆ ತಾವು ಮಾಡುವ ಕೂಲಿ ಕೆಲಸಕ್ಕೆ, ಕನಿಷ್ಠ ವೇತನವಾಗಲಿ, ಸಮಾನ ಹಕ್ಕು ಸಿಗುತ್ತಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಈ ಬುಡಕಟ್ಟು ಕುಟುಂಬಗಳಿಗೆ ಮೂಲ ಸೌಕರ್ಯ ಸಿಗದಿರುವುದು ವಿಪರ್ಯಾಸವೇ ಸರಿ. ಆದ್ದರಿಂದ ಆದಿವಾಸಿ ಜನರಿಗೆ ಮನೆ , ನಿವೇಶನ ನೀಡಬೇಕೆಂದು ಒತ್ತಾಯಿಸಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ರೈತ ಸಂಘದ ಜಿಲ್ಲಾ ಕಾಯಂ ಸದಸ್ಯ ಬಸವರಾಜು ಮಧುವನಹಳ್ಳಿ ಮಾತನಾಡಿ, ಬಿಜೆಪಿ ಸರ್ಕಾರ ದೇಶದ ಜನರಿಗೆ ಅಚ್ಚೇ ದಿನ್ ಎಂಬುದಾಗಿ ಹೇಳುತ್ತಿದೆ. ಆದರೆ ಈ ದೇಶದ ಮೂಲ ನಿವಾಸಿಗಳಾದ ಆದಿವಾಸಿ ಜನರು ಇನ್ನೂ ಜೀತ ಪದ್ಧತಿಗೆ ಸಿಲುಕಿದ್ದು, ಕನಿಷ್ಠ ಸೂರಿಲ್ಲದೆ ಜೀವಿಸುವ ಪರಿಸ್ಥಿತಿ ನಮ್ಮ ರಾಜ್ಯದಲ್ಲಿದೆ. ಈ ಸರ್ಕಾರದಿಂದ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ ವಿನಹ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ಸ್ವರಾಜ್ ಸಂಘಟನೆ ಶಿವಮ್ಮ, ಪ್ರಗತಿಪರ ಸಂಘಟನೆಯ ಸಂಚಾಲಕ ಒಕ್ಕೂಟ ದಿಲೀಪ್ ಸಿದ್ದಪ್ಪಾಜಿ, ದಲಿತ ಸಂಘರ್ಷ ಸಮಿತಿಯ ಲಿಂಗರಾಜು, ರೈತ ಸಂಘದ ಜಿಲ್ಲಾ ಕಾಯಂ ಸದಸ್ಯ ಬಸವರಾಜು ಮಧುವನಹಳ್ಳಿ ಮತ್ತಿತರಿದ್ದರು.