ಇಂದು ದಾವಣಗೆರೆ ಬಂದ್‌ -ವಿವಿಧ ಪಕ್ಷ, ಸಂಘಟನೆಗಳ ಬೆಂಬಲ

Screenshot_2023-09-25-09-04-06-619_com.android.chrome.jpg
Published on

ದಾವಣಗೆರೆ: ಭದ್ರಾ ನೀರಿಗಾಗಿ ಆಗ್ರಹಿಸಿ ಕಳೆದೊಂದು ವಾರದಿಂದ ನಿರಂತರ ಪ್ರತಿಭಟನೆ ನಡೆಸಿದರೂ ಸರ್ಕಾರ ಕಣ್ತೆರೆಯದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಸೋಮವಾರ ದಾವಣಗೆರೆ ಬಂದ್ ನಡೆಸಲು ಸಜ್ಜಾಗಿದ್ದಾರೆ.

ಇದುವರೆಗೆ ನೀರಾವರಿ ಇಲಾಖೆಗೆ ಮುತ್ತಿಗೆ, ಹೆದ್ದಾರಿ ತಡೆ ಇನ್ನಿತರೆ ಚಳವಳಿ ನಡೆಸಿದ್ದ ರೈತರು, ಟ್ರಾೃಕ್ಟರ್ ಜಾಥಾ ನಡೆಸಲು ಮುಂದಾದಾಗ ಪೊಲೀಸರು ತಡೆಯೊಡ್ಡಿ ಬಂಧಿಸಿ, ನಂತರ ಬಿಡುಗಡೆಗೊಳಿಸಿದ್ದರು.

ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆದಿಯಾಗಿ ಜಿಲ್ಲೆಯ ಶಾಸಕರು ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮನವಿ ಮಾಡಿದ್ದರೂ ಯಾವುದೇ ತೀರ್ಮಾನವಾಗಿರಲಿಲ್ಲ.

ಒಂದೆರಡು ದಿನದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಜಿಲ್ಲಾ ಸಚಿವರು ಭರವಸೆ ನೀಡಿದ್ದರೂ ಫಲಿಸಲಿಲ್ಲ. ಹೀಗಾಗಿ ಭಾರತೀಯ ರೈತ ಒಕ್ಕೂಟ ದಾವಣಗೆರೆ ಬಂದ್‌ಗೆ ಕರೆ ನೀಡಿದೆ. ಎಕರೆಗೆ 35ರಿಂದ 40 ಸಾವಿರ ರೂ.ಗಳಷ್ಟು ವೆಚ್ಚ ಮಾಡಿ, ಭತ್ತ ಉಳಿಸಿಕೊಳ್ಳು ಪರದಾಡುತ್ತಿರುವ ಬೆಳೆಗಾರರು ಸರ್ಕಾರದತ್ತ ಮುಖ ಮಾಡಿದ್ದಾರೆ.

ಬೆಳಗ್ಗೆ 8ಕ್ಕೆ ಜಯದೇವ ವೃತ್ತದಲ್ಲಿ ರೈತರು ಜಮಾವಣೆ ಆಗಲಿದ್ದು ನಗರಾದ್ಯಂತ ಸಂಚರಿಸಿ ಶಾಂತಿಯುತ ಬಂದ್ ಮಾಡಲಿದ್ದೇವೆ. ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಾಗಿಲು ಹಾಕಿ ಸಹಕರಿಸುವಂತೆ ಮನವಿ ಮಾಡಲಾಗುವುದು ಎಂದು ರೈತ ಮುಖಂಡ ಎಚ್.ಆರ್.ಲಿಂಗರಾಜ್ ತಿಳಿಸಿದರು.

ಪರಿಸ್ಥಿತಿ ಗಮನಿಸಿ ಬಸ್ ಕಾರ್ಯಾಚರಣೆ

ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆಗೆ ತೊಂದರೆ ಇಲ್ಲ. ಆದರೂ ಬಂದ್ ಪ್ರಕ್ರಿಯೆ ಗಮನಿಸಿ ಮುಂದುವರಿಯುವುದಾಗಿ

ಎಂದು ರಾಜ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

ಖಾಸಗಿ ಬಸ್ ಮಾಲೀಕರ ಸಂಘದವರೂ ಬೆಂಬಲ ವ್ಯಕ್ತಪಡಿಸಿದ್ದು ಬಸ್ ಸಂಚಾರ ಅನಿವಾರ್ಯವಾದಲ್ಲಿ ಪೊಲೀಸರ ರಕ್ಷಣೆ ಪಡೆಯಲು ಸಂಘ ಮುಂದಾಗಿದೆ. ಬಿಜೆಪಿ ಹಾಗೂ ಆಮ್‌ಆದ್ಮಿ ಪಕ್ಷಗಳು ಕೂಡ ಬಂದ್‌ಗೆ ಸಹಕಾರ ನೀಡಿವೆ.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಎಪಿಎಂಸಿ ದಲಾಲರ ಸಂಘ, ಜಿಲ್ಲಾ ಶಾಶ್ವತ ಅನುದಾನರಹಿತ ಶಾಲಾಡಳಿತ ಮಂಡಳಿಗಳ ಸಂಘ, ಕರ್ನಾಟಕ ಏಕತಾ ವೇದಿಕೆ ಮೊದಲಾದ ಸಂಘಟನೆಗಳು ಬೆಂಬಲ ಘೋಷಿಸಿವೆ.

ಒಂದು ದಿನದ ಮಟ್ಟಿಗೆ ಬಂದ್‌ಗೆ ಸಹಕರಿಸುವಂತೆ ಹೋಟೆಲ್ ಮಾಲೀಕರಿಗೆ ಸಂದೇಶ ಕಳಿಸಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಮೋತಿ ಪರಮೇಶ್ವರರಾವ್ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಡಿ.ನಾರಾಯಣಗೌಡ ಬಣ) ಬಂದ್‌ಗೆ ಬೆಂಬಲ ಸೂಚಿಸಿಲ್ಲವಾದರೂ ಭದ್ರಾ ನೀರಿಗಾಗಿ ಆಗ್ರಹಿಸಿ ಡಿಸಿ ಕಚೇರಿ ಎದುರು ಉರುಳುಸೇವೆ ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net