ಇಂದು ಕೆ.ಆರ್.ಪೇಟೆಗೆ ಪಂಚರತ್ನ ಯಾತ್ರೆ

24 krp-002
Published on

ಕೆ.ಆರ್.ಪೇಟೆ: ಜೆಡಿಎಸ್ ಮಹತ್ವಾಕಾಂಕ್ಷಿಯ ಪಂಚರತ್ನ ರಥಯಾತ್ರೆಯು ಭಾನುವಾರ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ವಾಗತಕ್ಕೆ ತಾಲೂಕು ಜೆಡಿಎಸ್ ಕಾರ್ಯಕರ್ತರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು ಅವರನ್ನು ಕ್ಷೇತ್ರದ ಅಭ್ಯರ್ಥಿ ಎಂದು ಜೆಡಿಎಸ್ ಪಕ್ಷ ಘೋಷಿಸಿದ್ದು, ಮಂಜು ಸಾರಥ್ಯದಲ್ಲಿ ಎಚ್‌ಡಿಕೆ ಅವರನ್ನು ಸ್ವಾಗತಿಸುವ ಸಿದ್ಧತೆಗಳು ನಡೆಯುತ್ತಿವೆ.


ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಡಿ.25ರ ಬೆಳಗ್ಗೆ 9.45ಕ್ಕೆ ಕುಮಾರಣ್ಣ ಸಾರಥ್ಯದ ಪಂಚರತ್ನ ರಥ ತಾಲೂಕಿನ ಗಡಿ ಭಾಗವಾದ ಅಶೋಕ ನಗರಕ್ಕೆ ಆಗಮಿಸಲಿದೆ. ಅಲ್ಲಿಂದ ಬೈಕ್ ರ‌್ಯಾಲಿಯ ಮೂಲಕ ಸಾವಿರಾರು ಜೆಡಿಎಸ್ ಕಾರ್ಯಕರ್ತರು ರಥಯಾತ್ರೆಯಲ್ಲಿ ಸಾಗಲಿದ್ದಾರೆ. ಅಶೋಕ ನಗರದಿಂದ ಬೆಳಗ್ಗೆ 10.30 ಕ್ಕೆ ರಥ ಬೂಕನಕೆರೆಗೆ ಆಗಮಿಸಲಿದೆ.


ರಸ್ತೆಗಳಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್, ಬ್ಯಾನರ್ಸ್‌: ಕೆ.ಆರ್.ಪೇಟೆ ಪಟ್ಟಣದಲ್ಲಿ ಎಚ್‌ಡಿಕೆ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಬಳಿಯಿಂದ ಬಿಜಿಎಸ್ ಕಾಲೇಜು ವೃತ್ತದವರೆಗೂ ಜೆಡಿಎಸ್ ಪಕ್ಷದ ಫ್ಲೆಕ್ಸ್‌ಗಳು, ಬಂಟಿಂಗ್ಸ್ ಮತ್ತು ಬಾವುಟಗಳು ರಾರಾಜಿಸುತ್ತಿವೆ. 9 ಸಾವಿರ ಮಹಿಳೆಯರು ಪೂರ್ಣಕುಂಭದ ಮೂಲಕ ಕುಮಾರಣ್ಣ ಅವರನ್ನು ಸ್ವಾಗತಿಸಲಿದ್ದಾರೆ. ವೀರಭದ್ರ ನೃತ್ಯ, ಗಾರುಡಿಗೊಂಬೆ, ಚಂಡ ವಾದ್ಯ, ಮಲ್ಲಕಂಭ, ಕೀಲು ಕುದುರೆ ನೃತ್ಯ, ಪೂಜಾ ಕುಣಿತ ಮತ್ತಿತರ ಜನಪದ ಕಲಾ ಪ್ರದರ್ಶನಗಳೊಂದಿಗೆ ಎಚ್.ಡಿ.ಕೆ ರಥಯಾತ್ರೆಯ ಮೆರವಣಿಗೆ ಸಾಗಲಿದೆ.

ಮಧ್ಯಾಹ್ನ 1.30ಕ್ಕೆ ಪಟ್ಟಣದ ಪುರಸಭೆಯ ಪಕ್ಕದ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಸುಮಾರು 25 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ. ಸಭೆಗೆ ಆಗಮಿಸುವವರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ.


ಪಟ್ಟಣದ ಬಹಿರಂಗ ಸಭಾ ಕಾರ್ಯಕ್ರಮದ ಮುಗಿದ ನಂತರ ಪಂಚರತ್ನ ರಥ ಚಿಕ್ಕಹೊಸಹಳ್ಳಿ, ಹರಿರಾಯನ ಹಳ್ಳಿ, ಚೀಲದಹಳ್ಳಿ, ಅಗ್ರಹಾರಬಾಚಹಳ್ಳಿ, ವಳಗೆರೆ ಮೆಣಸ, ಶೆಟ್ಟಿನಾಯಕನಕೊಪ್ಪಲು, ಸಚಿವ ಕೆ.ಸಿ.ನಾರಾಯಣಗೌಡ ಸ್ವಗ್ರಾಮ ಕೈಗೋನಹಳ್ಳಿ, ಸಾರಂಗಿ, ಜಾಗಿನಕೆರೆ, ಕೊಟಗಳ್ಳಿ, ಸಂತೇಬಾಚಹಳ್ಳಿ ಕ್ರಾಸ್ ಮೂಲಕ ರಾತ್ರಿ 9.30 ಕ್ಕೆ ಸಂತೇಬಾಚಹಳ್ಳಿ ಗ್ರಾಮಕ್ಕೆ ಆಗಮಿಸಲಿದೆ. ಸಂತೇಬಾಚಹಳ್ಳಿಯಲ್ಲಿ ರಾತ್ರಿ ವಾಸ್ತವ್ಯ ಮಾಡಲಿರುವ ಕುಮಾರಸ್ವಾಮಿ ಡಿ.26 ರ ಬೆಳಗ್ಗೆ ನೆರೆಯ ನಾಗಮಂಗಲ ತಾಲೂಕಿಗೆ ಪ್ರವೇಶಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net