

ಹಾಸನ: ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನ. 3 ರಂದು ನವದೆಹಲಿಯಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿದ್ದು, ಅದರ ಪೂರ್ವಭಾವಿಯಾಗಿ ಶನಿವಾರ ಮತ್ತು ಭಾನುವಾರ ಕಂದಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಹೆಚ್.ಎಸ್.ಜೈಕುಮಾರ್ ತಿಳಿಸಿದರು.
ಶನಿವಾರ ಆರಂಭವಾಗಿರುವ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರದಲ್ಲಿ ದಕ್ಷಿಣ ಕರ್ನಾಟಕ ಜಿಲ್ಲೆಗಳ ನೌಕರರ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪ್ರಧಾನ ಕಾರ್ಯದಶಿ ಶ್ರೀಕುಮಾರ್ ಮಾರ್ಗದರ್ಶನ ನೀಡಲಿದ್ದಾರೆ ಎಂದು ಶನಿವಾರ ಸುದ್ದಿಗೊಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರವು ಪಿ.ಎಫ್.ಆರ್.ಡಿ.ಎ ಕಾಯ್ದೆ, ಎನ್.ಪಿ.ಎಸ್. ಪದ್ಧತಿಯನ್ನು ರದ್ದುಗೊಳಿಸಿ, ನಿಶ್ಚಿತ ಪಿಂಚಣಿಯನ್ನು ಮರು ಸ್ಥಾಪಿಸಬೇಕು. ಅಲ್ಲದೇ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಪರಿಷ್ಕರಣೆ ಮಾಡಬೇಕು. ವಿವಿಧ ಇಲಾಖೆಯಲ್ಲಿ ಖಾಲಿಯಿರುವ 2.60 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಗುತ್ತಿಗೆ, ಹೊರಗುತ್ತಿಗೆ, ಅತಿಥಿ ನೌಕರರಿಗೆ ಕಾಯಂ ನೇಮಕಾತಿಯಲ್ಲಿ ಪ್ರಾತಿನಿಧ್ಯ ನೀಡಬೇಕು. 2016ರಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯದಲ್ಲಿ ಗುತ್ತಿಗೆ, ದಿನಗೂಲಿ, ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಹೊರಗುತ್ತಿಗೆ ಏಜೆನ್ಸಿಗಳು ಶೋಷಣೆ ಮಾಡುತ್ತಿವೆ ಎಂದರು.
ಆಡಳಿತ ಸುಧಾರಣೆ ಆಯೋಗ-2ರ ಶಿಫಾರಸುಗಳಲ್ಲಿ ಕೆಲವು ಉತ್ತಮ ಅಂಶಗಳಿದ್ದರೂ ಸಹ ಆಹಾರ, ಆರೋಗ್ಯ ಮತ್ತು ಶಿಕ್ಷಣ ಮತ್ತು ಇನ್ನೂ ಹತ್ತಾರು ಇಲಾಖೆಗಳ ಸೇವೆಗಳನ್ನು ಖಾಸಗೀಕರಣ ಮಾಡುವ ಅಂಶಗಳಿವೆ. ಆದ್ದರಿಂದ ಅಸಂವಿಧಾನಿಕವಾದ ನೌಕರ-ವಿರೋಧಿ ಅಂಶಗಳನ್ನು ನಡತೆ ನಿಯಮಗಳಿಂದ ಕೈಬಿಡಬೇಕು ಈ ಎಲ್ಲದ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚೆಸಿ ಮುಂದಿನ ದಿನಗಳ ಹೋರಾಟವನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೂಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ, ಕಾರ್ಯಾಧ್ಯಕ್ಷೆ ಎನ್.ಶೋಭಾಲೋಕ ನಾಗಣ್ಣ, ಜಿಲ್ಲಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಜಯಪ್ರಕಾಶ್, ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ್ ಇದ್ದರು.