ಇಂದಿರಾ ಕ್ಯಾಂಟೀನ್​ನಲ್ಲಿ ನೂತನ ಮೆನು

29 05
Published on

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ವಿಭಿನ್ನ ತಿಂಡಿ, ಊಟ ಲಭ್ಯ

ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್​ನಲ್ಲಿ ಪ್ರಸ್ತುತ ನೂತನವಾಗಿ ಮೆನು ಸಿದ್ಧಪಡಿಸಲಾಗಿದೆ. ಬೆಳಗಿನ ಉಪಹಾರದಲ್ಲಿ ರೈಸ್​ಬಾತ್​, ಚಿತ್ರಾನ್ನ, ಉಪ್ಪಿಟ್ಟು, ಕೇಸರಿಬಾತ್​, ಇಡ್ಲಿ- ಸಾಂಬಾರ್​- ಚಟ್ನಿ, ಮಧ್ಯಾಹ್ನದ ಊಟಕ್ಕೆ ಮುದ್ದೆ, ಅನ್ನ, ಸಾಂಬಾರ್​, ಮೊಸರನ್ನ, ಚಪಾತಿ ಹಾಗೂ ರಾತ್ರಿ ಊಟಕ್ಕೆ ರೈಸ್​ಬಾತ್​ ಮತ್ತು ಮೊಸರನ್ನ ಸಿಗಲಿದೆ.

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 4 ಇಂದಿರಾ ಕ್ಯಾಂಟೀನ್​ಗಳೊಂದಿಗೆ ಹೊಸದಾಗಿ ತುಮಕೂರು ಜಿಲ್ಲಾಸ್ಪತ್ರೆ ಮತ್ತು ಎಪಿಎಂಸಿ ಮಾರುಕಟ್ಟೆ ಬಳಿ 2 ಇಂದಿರಾ ಕ್ಯಾಂಟೀನ್​ಗಳನ್ನು ಕಾರ್ಯಾರಂಭಗೊಳಿಸಲಾಗಿದೆ. ಪ್ರತಿದಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಹಾಗೂ ಮಾರುಕಟ್ಟೆಗೆ ಆಗಮಿಸುವ ರೈತರು, ಗ್ರಾಹಕರು ಹಾಗೂ ವರ್ತಕರ ಅನುಕೂಲಕ್ಕಾಗಿ ಹೊಸದಾಗಿ 2 ಇಂದಿರಾ ಕ್ಯಾಂಟೀನ್​ಗಳನ್ನು ಪ್ರಾರಂಭಿಸಲಾಗಿದೆ.

ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಿಂದಾಗಿ ಬಡಜನರು ಅವರ ಸಮತೋಲಿತ ಹಾಗೂ ಪೌಷ್ಟಿಕ ಆಹಾರದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರವು ರಾಜ್ಯದ ಜಿಲ್ಲೆ ಹಾಗೂ ತಾಲೂಕು ಕೇಂದ್ರದ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್​ ಅನ್ನು ಪ್ರಾರಂಭಿಸಿ 5 ರೂಪಾಯಿಗಳಿಗೆ ಬೆಳಗಿನ ಉಪಹಾರ ಹಾಗೂ 10 ರೂಪಾಯಿಗಳಿಗೆ ಮಧ್ಯಾಹ್ನ ಮತ್ತು ಸಂಜೆಯ ಊಟಗಳನ್ನು ಒದಗಿಸುತ್ತಿದೆ.

ನಗರದಲ್ಲಿರುವ ಇಂದಿರಾ ಕ್ಯಾಂಟೀನ್​ಗಳು ಸುಸಜ್ಜಿತ ಮತ್ತು ಆಧುನಿಕವಾದ ಮಾಸ್ಟರ್​ ಕಿಚನ್​ ಅನ್ನು ಒಳಗೊಂಡಿವೆ. ಪ್ರತಿ ಕ್ಯಾಂಟೀನ್​ಗಳಲ್ಲಿ ಶುದ್ಧ ಹಾಗೂ ಆರೋಗ್ಯಕರ ಕುಡಿಯುವ ನೀರನ್ನು ಸರಬರಾಜು ಮಾಡಲು ಆರ್​ಒ ಪ್ಲಾಂಟ್​ ಅಳವಡಿಸಲಾಗಿದೆ. ಇಂದಿರಾ ಕ್ಯಾಂಟೀನ್​ಗಳಲ್ಲಿ ಸುಳ್ಳಲೆಕ್ಕ ತಪ್ಪಿಸಲು ಸಿಸಿ ಕ್ಯಾಮರಾ ಅಳವಡಿಸಲು ಇತ್ತೀಚೆಗೆ ಆಗಮಿಸಿದ್ದ ಸಚಿವ ರಹೀಂ ಖಾನ್​ ಸೂಚಿಸಿದ್ದರು.

ಸಾರ್ವಜನಿಕರನ್ನು ಆಕರ್ಷಿಸಲು ನಗರದ ಇತರ ಖಾಸಗಿ ಹೋಟೆಲ್​ಗಳಿಗಿಂತ ವಿಭಿನ್ನ ರೀತಿಯಲ್ಲಿ ಕ್ಯಾಂಟೀನ್​ಗಳನ್ನು ಹೂಗುಚ್ಛ ಹಾಗೂ ವಿದ್ಯುತ್​ ದೀಪಗಳಿಂದ ಅಲಂಕರಿಸಿ ವಿಶಿಷ್ಟ ಮತ್ತು ಮಾದರಿಯಾಗಿ ನಿರ್ವಹಿಸಲಾಗುತ್ತಿದೆ. ಸಾರ್ವಜನಿಕರು ಈ ಸೌಲಭ್ಯ ಬಳಸಿಕೊಂಡು ಇಂದಿರಾ ಕ್ಯಾಂಟೀನಿನ ಲಾಭ ಪಡೆಯಬೇಕು. ಊಟದ ರುಚಿ ಹಾಗೂ ಶುಚಿತ್ವದಲ್ಲಿ ಕೊರತೆಗಳಿದ್ದಲ್ಲಿ ನೇರವಾಗಿ ಪಾಲಿಕೆಗೆ ದೂರು ನೀಡಬಹುದಾಗಿದೆ.

ಹೊಸದಾಗಿ ಆರಂಭಿಸಲಾದ ಜಿಲ್ಲಾಸ್ಪತ್ರೆ ಆವರಣ ಮತ್ತು ಎಪಿಎಂಸಿ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್​ಗಳ ಲಾಭ ಪಡೆಯುತ್ತಿರುವ ಸಾರ್ವಜನಿಕರನ್ನು ಮಾತನಾಡಿಸಿದಾಗ ಉತ್ತಮವಾದ ರುಚಿಯಾದ ಆಹಾರವನ್ನು ಕಡಿಮೆ ಬೆಲೆಯಲ್ಲಿ ವಿತರಿಸುತ್ತಿರುವುದರಿಂದ ಗ್ರಾಮೀಣ ಭಾಗದಿಂದ ಆಗಮಿಸುತ್ತಿರುವ ನಮ್ಮಂತಹವರಿಗೆ ಅನುಕೂಲವಾಗಿದೆ ಎಂದು ಖುಷಿಯಿಂದ ಹೇಳುವುದು ಖುಷಿ ನೀಡಿದೆ.

| ಬಿ.ವಿ.ಅಶ್ವಿಜ ಆಯುಕ್ತೆ, ತುಮಕೂರು ಮಹಾನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net