ಇಂದಿರಾ ಕ್ಯಾಂಟೀನ್ ಕಾಮಗಾರಿ ಪರಿಶೀಲನೆ

Published on

ಹನೂರು: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿಯ ಸ್ಥಳಕ್ಕೆ ಶುಕ್ರವಾರ ಶಾಸಕ ಎಂ.ಆರ್. ಮಂಜುನಾಥ್ ತೆರಳಿ ಪರಿಶೀಲಿಸಿದರು.

ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆ ನೀಡಿದರು. ಹನೂರು ತಾಲೂಕು ರಚನೆಯಾಗಿ 6 ವರ್ಷ ಕಳೆದಿದ್ದು, ಇಲ್ಲಿ ತಹಸೀಲ್ದಾರ್, ಪೊಲೀಸ್, ಕೃಷಿ, ತಾಲೂಕು ಪಂಚಾಯಿತಿ, ಪಶು ವೈದ್ಯಕೀಯ, ಉಪ ನೋಂದಣಿ ಕಚೇರಿ ಸೇರಿದಂತೆ ಇನ್ನು ಕೆಲವು ಕಚೇರಿಗಳಿವೆ. ಇಲ್ಲಿಗೆ ದೂರದ ಊರುಗಳಾದ ಗೋಪಿನಾಥಂ, ಮ.ಬೆಟ್ಟ, ಪಾಲಾರ್, ಜಲ್ಲಿಪಾಳ್ಯ, ಪೊನ್ನಾಚಿ, ಒಡೆಯರಪಾಳ್ಯ, ಅರ್ಧನಾರಿಪುರ ಇನ್ನಿತರೆ ಕಡೆಗಳಿಂದ ಬಡತನ ಕುಟುಂಬಕ್ಕೆ ಸೇರಿದ ಹೆಚ್ಚಿನ ಜನರು ಕೆಲಸ ಕಾರ್ಯಗಳ ನಿಮಿತ್ತ ನಿತ್ಯ ಪಟ್ಟಣಕ್ಕೆ ಆಗಮಿಸುತ್ತಾರೆ.

ಜತೆಗೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸಹ ಆಗಮಿಸುತ್ತಾರೆ. ಅಲ್ಲದೇ ಪಟ್ಟಣದಲ್ಲಿ ಕೂಲಿ ಕಾರ್ಮಿಕರು ಹೆಚ್ಚಿದ್ದಾರೆ. ಇದೀಗ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಬಡಜನರ ಹಸಿವು ನೀಗಿಸಲಿದೆ. ಇದರಿಂದ ಅನುಕೂಲವಾಗಲಿದೆ. ಹಾಗಾಗಿ ಸದ್ಯದಲ್ಲಿಯೇ ಇಂದಿರಾ ಕ್ಯಾಂಟೀನ್ ಜನರ ಸೇವೆಗೆ ಸಮರ್ಪಿಸಲಾಗುವುದು. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಮುತುರ್ವಜಿ ವಹಿಸಿ ಕ್ಯಾಂಟೀನ್ ಮುಂಭಾಗದಲ್ಲಿನ ಹಳೆ ಕಾಂಪೌಂಡ್ ಹಾಗೂ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬವನ್ನು ತೆರೆವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಜತೆಗೆ ಬಾಕಿ ಉಳಿದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಉದ್ಘಾಟನೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚಿಸಿದರು. ಪಪಂ ಅಧ್ಯಕ್ಷೆ ಮಮ್ತಾಜ್‌ಬಾನು, ಪಪಂ ಮುಖ್ಯಾಧಿಕಾರಿ ಅಶೋಕ್, ಮುಖಂಡ ರಾಜುಗೌಡ, ಜಸ್ಸೀಂಪಾಷ, ಅಮಿನ್, ರಂಗಸ್ವಾಮಿ, ಸತೀಶ್, ಗೋವಿಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net