

ಕಲಬುರಗಿ: ಸಿದ್ದರಾಮಯ್ಯನವರ ಹಿಂದಿನ ಸರ್ಕಾರದಲ್ಲಿ ಆರಂಭಿಸಿದ್ದ ಇಂದಿರಾ ಕ್ಯಾಂಟಿನ್‌ಗಳನ್ನು ಪ್ರಸ್ತುತ ಬಂದ್ ಮಾಡಿದ್ದು, ಕೂಡಲೇ ಅವುಗಳನ್ನು ಪುನಃ ಆರಂಭಿಸಿ ಬಡವರಿಗೆ ಅನುಕೂಲ ಕಲ್ಪಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್ ಸೈಯದ್ ಮುನೀರ್, ಬಾಬಾ ಸಾಹೇಬ್ ಆಗ್ರಹಿಸಿದರು. ಕೂಲಿ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಹೊತ್ತಿನ ಊಟದ ಕೇಂದ್ರವಾಗಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂದ್ ಮಾಡಲಾಗಿತ್ತು. ಆದರೆ ಪ್ರಸ್ತುತ ಪುನಃ ಸಿದ್ದರಾಮಯ್ಯನವರ ಸರ್ಕಾರ ಬಂದು ಒಂದು ವರ್ಷವಾದರೂ ಕ್ಯಾಂಟೀನ್ ಆರಂಭಿಸದಿರುವುದು ದುರದೃಷ್ಟಕರ ಸಂಗತಿ ಎಂದು ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಕಲಬುರಗಿ ನಗರದಲ್ಲಿ ಎಂಟು ಇಂದಿರಾ ಕ್ಯಾಂಟೀನ್‌ಗಳಿದ್ದು ಅವುಗಳನ್ನು ಪುನಃ ಆರಂಭಿಸಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗಮನ ಹರಿಸಬೇಕು. ಗ್ಯಾರಂಟಿ ನೆಪದಲ್ಲಿ ಜನರಿಗೆ ಅನುಕೂಲಕರವಾದ ಕ್ಯಾಂಟೀನ್‌ಗಳನ್ನು ಮುಚ್ಚುವ ಪ್ರಯತ್ನ ಮಾಡಬಾರದು. ಹೊಸ ಯೋಜನೆ ಆರಂಭಿಸಿ, ಹಳೇ ಯೋಜನೆ ಮರೆಯಬಾರದು. ತಿಂಗಳಲ್ಲಿ ಕ್ಯಾಂಟೀನ್ ಆರಂಭಿಸದಿದ್ದರೆ ಮಹಾನಗರ ಪಾಲಿಕೆ ಎದುರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.