

ಅರಕಲಗೂಡು: ಅವ್ಯವಸ್ಥೆಯ ಆಗರವಾದ ಇಂದಿರಾ ಕ್ಯಾಂಟೀನ್ ಲ್ಲಿ ಭಾರಿ ಗೋಲ್ ಮಾಲ್ ನಡೆಯುತ್ತಿರುವ ಶಂಕೆ ಇದ್ದು ಜಿಲ್ಲಾಧಿಕಾರಿ ಕ್ರಮಕ್ಕೆ ಮುಂದಾಗಬೇಕು ಎಂದು ಜಿಪಂ ಸದಸ್ಯ ಎಸ್.ಪಿ. ರೇವಣ್ಣ ಒತ್ತಾಯಿಸಿದ್ದಾರೆ.
ಪಟ್ಟಣದ ಇಂದಿರಾ ಕ್ಯಾಂಟೀನ್ ಗೆ ಇಂದು ಬೆಳಗ್ಗೆ ಭೇಟಿ ನೀಡಿ ಅಡಿಗೆ ಆಹಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಬೆಳಗಿನ ತಿಂಡಿ ಬಾತ್ ರೈಸ್ ತಯಾರಿಸಲು ಮಸಾಲೆ, ತರಕಾರಿ ಇಲ್ಲ, ಕಳಪೆ ಒಗ್ಗರೆಣ್ಣೆ ಬಳಸಲಾಗಿದ್ದು ರುಚಿಕರವಾಗಿಲ್ಲ.ಮಾಜಿ ಸಿಎಂ ಸಿದ್ದರಾಮಯ್ಯ ಬಡವರ ಹೊಟ್ಟೆ ತುಂಬಿಸಲು ಜಾರಿಗೆ ತಂದ ಕ್ಯಾಂಟೀನ್ ಏಜೆನ್ಸಿಯವರ ಜೇಬು ತುಂಬಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ನಿತ್ಯ ಕನಿಷ್ಠ ಜನರು ಇಲ್ಲಿಗೆ ಬರುವುದು ಅನುಮಾನ, ಆದರೆ ಹೆಚ್ಚೆಚ್ಚು ಜನರ ತಿಂಡಿ ಊಟದ ಬಿಲ್ ಮಾಡಿಕೊಳ್ಳುವ ದಂಧೆ ನಡೆಯುತ್ತಿರುವ ಶಂಕೆ ಇದೆ. ತಿನ್ನುವ ಆಹಾರದಲ್ಲೂ ಲೂಟಿಯಾಗುತ್ತಿದ್ದು, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಅವ್ಯವಸ್ಥೆ ಸರಿಪಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಏಕಾಂಗಿ ಧರಣಿ ಕುಳಿತು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕ್ಯಾಂಟೀನ್ ಗೆ ಖಾಸಗಿ ವ್ಯಕ್ತಿಯಿಂದ ಸರಬರಾಜಾಗಿರುವ ಅಕ್ಕಿ ಗುಣಮಟ್ಟವಾಗಿಲ್ಲ, ಫಿಲ್ಟ್ ರ್ ಬದಲಾಯಿಸಿಲ್ಲ. ಕೆಲ ತಿಂಗಳ ಹಿಂದೆ ಉಪಹಾರದಲ್ಲಿ ಹುಳು ಸತ್ತು ಬಿದ್ದಿದ್ದನ್ನು ಅರಿತು ಶಾಸಕರು ಇಲ್ಲಿಗೆ ಭೇಟಿ ನೀಡಿ ಶುಚಿತ್ವ ಕಾಪಾಡಿ ಅವ್ಯವಸ್ಥೆ ಸರಿಪಡಿಸುವಂತೆ ಪಪಂ ಅಧಿಕಾರಿಗಳಿಗೆ ಸೂಚಿಸಿದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.